ಬುಡಕಟ್ಟು ಜನಾಂಗದ ಬೇಡಿಕೆ ನ್ಯಾಯ ಸಮ್ಮತವಲ್ಲ : ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಕ್ಷೇಪ

11/11/2020

ಮಡಿಕೇರಿ ನ.11 : ಸಂಕಷ್ಟದ ಬದುಕು ಸಾಗಿಸುತ್ತಿರುವ ಆದಿವಾಸಿಗಳ ‘ಬುಡಕಟ್ಟು ಜನಾಂಗ’ ಸ್ಥಾನಮಾನವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಉನ್ನತ ಸ್ಥಿತಿಯಲ್ಲಿರುವ ಕೊಡವರಿಗೆ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಒತ್ತಾಯಿಸುತ್ತಿರುವುದು ನ್ಯಾಯ ಸಮ್ಮತವಲ್ಲವೆಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಅಧ್ಯಕ್ಷ ವೈ.ಕೆ.ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಬೇಡಿಕೆಯಂತೆ ಕೊಡವ ಸಮುದಾಯಕ್ಕೆ ಬುಡಕಟ್ಟು ಜನಾಂಗದ ಸ್ಥಾನಮಾನವನ್ನು ನೀಡುವುದೇ ಆಗಿದ್ದಲ್ಲಿ, ಮೊದಲು ಆದಿವಾಸಿಗಳ ಪ್ರತಿ ಕುಟುಂಬಕ್ಕೆ 25 ಏಕರೆ ಜಾಗವನ್ನು ನೀಡಲಿ. ಆಗ ನಾವು ನಮ್ಮ ಬುಡಕಟ್ಟು ಜನಾಂಗದ ಸ್ಥಾನವನ್ನೇ ಬಿಟ್ಟುಕೊಡುವುದಾಗಿ ತಿಳಿಸಿದರು.
ಕೊಡವರನ್ನು ಬುಡಕಟ್ಟು ಜನಾಂಗಕ್ಕೆ ಸೇರಿದವರೆಂದು ಘೋಷಣೆ ಮಾಡಿದರೆ ಆದಿವಾಸಿಗಳ ಮೇಲೆ ದೌರ್ಜನ್ಯ ಮತ್ತಷ್ಟು ಹೆಚ್ಚಾಗಬಹುದೆಂದು ಆರೋಪಿಸಿದರು. ಕೊಡವ ಭಾಷಿಕರಲ್ಲಿ 18 ಸಮುದಾಯದವರಿದ್ದು, ಅವರÀಲ್ಲಿ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳವಣಿಗೆಯನ್ನು ಕಂಡಿರುವ ಕೊಡವರನ್ನು ಮಾತ್ರ ಬುಡಕಟ್ಟು ಜನರೆಂದು ಪರಿಗಣಿಸಬೇಕಿದ್ದರೆ ಆರ್ಥಿಕವಾಗಿ ದುರ್ಬಲರಾಗಿರುವ ಕೊಡಗಿನವರೇ ಆಗಿರುವ ಇತರರನ್ನೂ ಯಾಕೆ ಬುಡಕಟ್ಟು ಜನರೆಂದು ಪರಿಗಣಿಸಬಾರದು ಎಂದು ಪ್ರಶ್ನಿಸಿದರು.
ಕೊಡವ ಸಮುದಾಯದ ಬಗ್ಗೆ ಅಧ್ಯಯನ ಮಾಡಿದ ಕೊಡವ ತಜ್ಞರ ಪ್ರಕಾರವೇ, ಕೊಡವರು ಮೂಲತ: ಕೊಡಗಿನ ಭೂ ಪ್ರದೇಶದ ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರು. ಬಳಿಕ ಇಲ್ಲಿನ ಬುಡಕಟ್ಟು ಜನರ ಜೀವನ ಶೈಲಿಯನ್ನು ಅಳವಡಿಸಿಕೊಂಡವರೆಂದು ಗಣೇಶ್ ತಿಳಿಸಿದರು.
ಸಿಎನ್‍ಸಿ ಸಂಘಟನೆ ಆದಿವಾಸಿಗಳ ಬುಡಕಟ್ಟು ಸ್ಥಾನಮಾನ ನೀಡಬೇಕೆನ್ನುವ ತನ್ನ ಹೋರಾಟವನ್ನು ಬಿಟ್ಟು ಕೊಡವ ಭಾಷಾ ಬೆಳವಣಿಗೆಗೆ, ಮರದ ಮೇಲಿನ ಹಕ್ಕು, ಕಾಫಿ, ಕರಿಮೆಣಸು, ಭತ್ತಕ್ಕೆ ನ್ಯಾಯ ಯುತವಾದ ಬೆಲೆ, ಉತ್ತಮ ಶಿಕ್ಷಣ ವ್ಯವಸ್ಥೆ, ಕ್ರೀಡಾಕೂಟಗಳ ಉತ್ತೇಜನ, ಎಲ್ಲಾ ವ್ಯವಸ್ಥೆಗಳಿರುವ ಆಸ್ಪತ್ರೆ, ಮಾಜಿ ಸೈನಿಕರುಗಳಿಗೆ ಅಗತ್ಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಹೋರಾಟ ನಡೆಸಿದಲ್ಲಿ ಅದಕ್ಕೆ ಆದಿವಾಸಿಗಳ ಸಂಪೂರ್ಣ ಬೆಂಬಲವಿದೆ ಎಂದು ಗಣೇಶ್ ಸ್ಪಷ್ಟಪಡಿಸಿದರು.
ಕೊಡವರನ್ನು ಬುಡಕಟ್ಟು ಜನಾಂಗವೆಂದು ಪರಿಗಣಿಸಬೇಕೆನ್ನುವ ಬೇಡಿಕೆಯನ್ನು ಕೈಬಿಡಬೇಕೆಂದು ಮನವಿ ಮಾಡಿದ ಅವರು, ಈ ಬಗ್ಗೆ ಆದಿವಾಸಿ ಮುಖಂಡರೆಲ್ಲರು ಒಗ್ಗೂಡಿ ಸಭೆ ನಡೆಸಿ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ನಡೆಸುವ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
::: ನಿಲ್ಲದ ಜೀತ ಪದ್ಧತಿ :::
ಕೊಡಗಿನಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದ್ದು, ಆದಿವಾಸಿಗಳನ್ನು ಜೀತದಾಳುಗಳನ್ನಾಗಿ ದುಡಿಸಿಕೊಳ್ಳುತ್ತಿರುವವರು ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ನೀಡದೆ ವಂಚಿಸುತ್ತಿದ್ದಾರೆ ಎಂದು ಗಣೇಶ್ ಇದೇ ಸಂದರ್ಭ ಆರೋಪಿಸಿದರು.
ಆದಿವಾಸಿಗಳನ್ನು ಲೈನ್‍ಮನೆಗಳಲ್ಲೇ ಹಿಡಿದಿಟ್ಟುಕೊಳ್ಳಬೇಕೆನ್ನುವ ಉದ್ದೇಶದಿಂದ ಅಲ್ಪ ಮೊತ್ತದ ಸಾಲ ನೀಡಿ ನಂತರ ದೊಡ್ಡ ಮೊತ್ತದ ಸಾಲ ಮರಳಿಸಲು ಬಾಕಿ ಇದೆ ಎಂದು ಸುಳ್ಳು ಹೇಳಿ ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ಕಸಿದುಕೊಂಡು ಬೆದರಿಕೆ ಒಡ್ಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬುಡಕಟ್ಟು ಜನರೆಂದು ಪರಿಗಣಿಸಲ್ಪಟ್ಟಿರುವ ಎರವರು, ಕುರುಬರು, ಪಣಿಯರು ಮೊದಲಾದವರು ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿದ್ದು, ಇನ್ನೂ ಕಾಡುಗಳಲ್ಲಿ ಜೀವಿಸುತ್ತಿದ್ದಾರೆ. ಕಾಡಿನಿಂದ ಹೊರಗೆ ಬಂದಿರುವ ಬಹುತೇಕ ಮಂದಿ ಕೃಷಿ ಕಾರ್ಮಿಕರಾಗಿ, ತೋಟಗಳಲ್ಲಿ ಕಾರ್ಮಿಕರಾಗಿ ಅತ್ಯಂತ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಖಜಾಂಚಿ ಜೆ.ಕೆ.ಪ್ರೇಮ ಹಾಗೂ ಸದಸ್ಯ ಪಿ.ಎಂ.ಮಣಿ ಉಪಸ್ಥಿತರಿದ್ದರು.