ಮಡಿಕೇರಿ ರಸ್ತೆ ದುರಸ್ತಿ ಪಡಿಸದಿದ್ದಲ್ಲಿ ಪ್ರತಿಭಟನೆ : ಜೆಡಿಎಸ್ ಮಹಿಳಾ ಮತ್ತು ಯುವ ಘಟಕ ಎಚ್ಚರಿಕೆ : ಪೌರಾಯುಕ್ತರಿಗೆ ಮನವಿ ಸಲ್ಲಿಕೆ

12/11/2020

ಮಡಿಕೇರಿ ನ.11 : ಮುಂದಿನ ಏಳು ದಿನಗಳೊಳಗೆ ಮಡಿಕೇರಿ ನಗರದ ರಸ್ತೆಗಳ ದುರಸ್ತಿ ಕಾರ್ಯವನ್ನು ಆರಂಭಿಸದಿದ್ದಲ್ಲಿ ಸಾರ್ವಜನಿಕರು ಹಾಗೂ ವಾಹನ ಚಾಲಕರ ಸಹಕಾರದೊಂದಿಗೆ ಜಾತ್ಯತೀತ ಜನತಾದಳದ ವತಿಯಿಂದ ನಗರಸಭೆ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮಹಿಳಾ ಘಟಕ ಹಾಗೂ ಯುವ ಘಟಕ ಎಚ್ಚರಿಕೆ ನೀಡಿದೆ.
ನಗರಸಭಾ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪಕ್ಷದ ಪ್ರಮುಖರು ತಕ್ಷಣ ರಸ್ತೆಗಳನ್ನು ಡಾಂಬರೀಕರಣಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಮಹಿಳಾ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೀಲಾಶೇಷಮ್ಮ, ಕಳೆದ ಎರಡು ವರ್ಷಗಳಿಂದ ನಗರದ ರಸ್ತೆಗಳನ್ನು ಡಾಂಬರೀಕರಣಗೊಳಿಸದೆ ಹಾಗೇ ಬಿಟ್ಟಿರುವುದರಿಂದ ರಸ್ತೆ ತುಂಬಾ ಹೊಂಡ, ಗುಂಡಿಗಳಾಗಿದ್ದು, ವಾಹನಗಳ ಸಂಚಾರ ಅಸಾಧ್ಯವಾಗಿದೆ. ಅಲ್ಲದೆ ಪಾದಾಚಾರಿಗಳಿಗೂ ನೆಮ್ಮದಿಯಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದರು.
ಇಂದಿರಾ ಕ್ಯಾಂಟೀನ್ ಬಳಿ ರಸ್ತೆಯನ್ನು ದುರಸ್ತಿ ಪಡಿಸುವುದಾಗಿ ಅಗೆದು ಹಾಕಿ ತಿಂಗಳೇ ಕಳೆದಿದೆ. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಮುತ್ತಪ್ಪ ದೇವಾಲಯ ರಸ್ತೆ, ಭಗವತಿ ನಗರ ರಸ್ತೆ, ಸಂತ ಜೋಸೆಫರ ಶಾಲೆ ರಸ್ತೆ, ಕಾವೇರಿ ಲೇ ಔಟ್ ರಸ್ತೆ, ಗಣಪತಿ ಬೀದಿ, ಕೆಳಗಿನ ಕೊಡವ ಸಮಾಜ ರಸ್ತೆ, ಗೌಳಿಬೀದಿ, ದೇಚೂರು ರಸ್ತೆ ಸೇರಿದಂತೆ ನಗರದ ಬಹುತೇಕ ಎಲ್ಲಾ ರಸ್ತೆಗಳು ಹದಗೆಟ್ಟಿವೆ ಎಂದು ತಿಳಿಸಿದರು.
ಈ ಹಿಂದೆ ಜೆಡಿಎಸ್ ಪಕ್ಷದ ವತಿಯಿಂದ ರಸ್ತೆ ದುರಸ್ತಿಗಾಗಿ ಆಗ್ರಹಿಸಿ ರಸ್ತೆ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಲಾಗಿತ್ತು. ಆದರೆ ನಗರಸಭೆ ಇಲ್ಲಿಯವರೆಗೆ ರಸ್ತೆ ಡಾಂಬರೀಕರಣಕ್ಕೆ ಮುಂದಾಗಿಲ್ಲ. ತಕ್ಷಣ ತಾವುಗಳಾದರೂ ವಿಶೇಷ ಕಾಳಜಿ ವಹಿಸಿ ನಗರದ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಶೀಘ್ರ ಆರಂಭಿಸಬೇಕೆಂದು ಮನವಿ ಮಾಡಿದರು.
ಒಂದು ವಾರದೊಳಗೆ ರಸ್ತೆ ಕಾಮಗಾರಿ ಆರಂಭವಾಗದಿದ್ದಲ್ಲಿ ಜೆಡಿಎಸ್ ವತಿಯಿಂದ ನಗರಸಭೆ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಲೀಲಾಶೇಷಮ್ಮ ತಿಳಿಸಿದರು.
::: ಬೇಡಿಕೆಗಳು :::
ನಗರದ ಎಲ್ಲಾ ರಸ್ತೆಗಳನ್ನು ಶೀಘ್ರ ಡಾಂಬರೀಕರಣಗೊಳಿಸಬೇಕು, ಮಳೆಗಾಲದಲ್ಲಿ ಬರೆ ಕುಸಿದು ಅಪಾಯದಂಚಿನಲ್ಲಿರುವ ಪ್ರದೇಶದಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು, ಎಲ್‍ಐಸಿ ಕಚೇರಿ ಬಳಿ ಮಳೆಗಾಲದ ನೀರಿನ ರಭಸಕ್ಕೆ ತೋಡು ನೀರಿನಿಂದ ರಸ್ತೆ ಕೊರೆತ ಉಂಟಾಗಿ ರಸ್ತೆ ಸಂಪೂರ್ಣ ಕುಸಿಯುವ ಹಂತದಲ್ಲಿದ್ದು, ಅನಾಹುತ ಸಂಭವಿಸುವ ಮೊದಲು ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು, ನಗರದ ಬೀದಿ ದೀಪಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕು, ನಗರದ ರೇಸ್ ಕೋರ್ಸ್ ರಸ್ತೆಯಲ್ಲಿ ನೂತನವಾಗಿ ಅಳವಡಿಸಿರುವ ಬೀದಿ ದೀಪದ ಕಂಬಗಳನ್ನು ರಸ್ತೆಯಲ್ಲೇ ಅಳವಡಿಸಲಾಗಿದ್ದು, ಇದನ್ನು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ವೈಜ್ಞಾನಿಕ ರೂಪದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ಕಂಬಗಳನ್ನು ಅಳವಡಿಸಬೇಕು, ಮನೆ ಮನೆ ಕಸ ಸಂಗ್ರಹ ಕಾರ್ಯ ಸಮರ್ಪಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಮತ್ತು ವೈಜ್ಞಾನಿಕ ರೂಪದಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಮುಂದಾಗಬೇಕು, ನಗರದ ಜನರಲ್ ತಿಮ್ಮಯ್ಯ ವೃತ್ತ ವ್ಯಾಪ್ತಿಯಲ್ಲಿ ಸುಲಭ್ ಶೌಚಾಲಯವನ್ನು ನಿರ್ಮಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು, ನಗರಸಭೆಯಲ್ಲಿ ಅರ್ಜಿ ಅಥವಾ ಕಡತಗಳ ವಿಲೇವಾರಿ ಸಂದರ್ಭ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು, ನಗರದಲ್ಲಿರುವ ಎಲ್ಲಾ ಉದ್ಯಾನವನಗಳ ಅಭಿವೃದ್ಧಿ ಮತ್ತು ಸ್ವಚ್ಛತೆ ಕಾಪಾಡಲು ವಿಶೇಷ ಆಸಕ್ತಿ ತೋರಬೇಕು ಎಂದು ಮನವಿ ಪತ್ರದ ಮೂಲಕ ಪ್ರಮುಖರು ಒತ್ತಾಯಿಸಿದರು.
ಯುವ ಜೆಡಿಎಸ್ ವಕ್ತಾರ ರವಿಕಿರಣ್, ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ಪ್ರಧಾನ ಕಾರ್ಯದರ್ಶಿ ಲತಾವಿನೋದ್, ಕಾರ್ಯದರ್ಶಿ ಜಾನಕಿ, ಸಂಘಟನಾ ಕಾರ್ಯದರ್ಶಿ ಝರು, ಜಿಲ್ಲಾ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಎಲ್ಸಿ ಬೇಬಿ, ಉಪಾಧ್ಯಕ್ಷೆ ದಿವ್ಯ ಮೇರಿ, ಮಲ್ಲಿಕಾರ್ಜುನ ನಗರದ ಅಧ್ಯಕ್ಷೆ ಪದ್ಮ ಹಾಗೂ ಕಾರ್ಯಕರ್ತರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.