ಲಂಚ ಪಡೆದ ಪ್ರಥಮ ದರ್ಜೆ ಸಹಾಯಕ ಎಸಿಬಿ ವಶಕ್ಕೆ : ಪೊನ್ನಂಪೇಟೆಯಲ್ಲಿ ಪ್ರಕರಣ

12/11/2020

ಮಡಿಕೇರಿ ನ.12 : ಗ್ರಾಮ ಪಂಚಾಯಿತಿಯ ನಿವೃತ್ತ ಪಂಪ್ ಆಪರೇಟರ್ ಒಬ್ಬರಿಂದ ನಿವೃತ್ತಿ ಉಪಧನ ಕೊಡಿಸಲು 1,500 ರೂ. ಲಂಚ ಪಡೆಯುತ್ತಿದ್ದ ಸಂದರ್ಭ ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆ ಕಚೇರಿಯ ಪ್ರಥಮ ದರ್ಜೆ ಸಹಾಯಕನನ್ನು ಭ್ರಷ್ಟಾಚಾರ ನಿಗ್ರಹ ದಳ ವಶಕ್ಕೆ ಪಡೆದಿದ್ದಾರೆ.
ಪೊನ್ನಂಪೇಟೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಭಾಸ್ಕರ್ ಎಂಬಾತನೇ ಲಂಚ ಪಡೆದ ಆರೋಪಿಯಾಗಿದ್ದು, ಆತನಿಂದ 1,500 ರೂ. ನಗದನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ತಾಲೂಕು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಬಿ.ಕೆ.ರಾಘವ ಎಂಬವರು ಮಾಲ್ದಾರೆ ಗ್ರಾಮ ಪಂಚಾಯಿತಿಯಲ್ಲಿ 1991ರಿಂದ ಪಂಪ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸಿ ಕೆಲ ತಿಂಗಳ ಹಿಂದೆ ನಿವೃತ್ತಿ ಹೊಂದಿದ್ದರು.
ಅವರಿಗೆ 15 ತಿಂಗಳ ನಿವೃತ್ತಿ ಉಪ ಧನ ಬರಲು ಬಾಕಿ ಇದ್ದ ಹಿನ್ನಲೆಯಲ್ಲಿ ಅದನ್ನು ಮಂಜೂರು ಮಾಡುವಂತೆ ಅಕ್ಟೋಬರ್ 6ರಂದು ಮಾಲ್ದಾರೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಕಚೇರಿಯಿಂದ ಅನುಮೋದನೆ ಪಡೆದುಕೊಂಡು ವಿಲೇವಾರಿಯಾಗಬೇಕಿತ್ತು. ಈ ಸಂದರ್ಭ ನಿವೃತ್ತ ಪಂಪ್ ಆಪರೇಟರ್ ಬಿ.ಕೆ. ರಾಘವ ಅವರು ಪೊನ್ನಂಪೇಟೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಅರುಣ್ ಭಾಸ್ಕರ್‍ನನ್ನು ಭೇಟಿಯಾಗಿ ತಮ್ಮ ಕಡತವನ್ನು ವಿಲೇವಾರಿ ಮಾಡುವಂತೆ ಮನವಿ ಮಾಡಿದ್ದರು. ಈ ಸಂದರ್ಭ ಸರಕಾರಿ ನೌಕರ ಅರುಣ್ ಭಾಸ್ಕರ್ 5 ಸಾವಿರ ರೂ.ಗಳನ್ನು ನೀಡುವಂತೆ ಬೇಡಿಕೆ ಇಟ್ಟು, ಮೊದಲ ಕಂತಿನ ರೂಪದಲ್ಲಿ 2 ಸಾವಿರ ರೂ.ಗಳನ್ನು ಪಡೆದುಕೊಂಡಿದ್ದ. ಇನ್ನುಳಿದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟ ಸಂದರ್ಭ ಕೆ.ಬಿ ರಾಘವ ಹೆಚ್ಚುವರಿ ಹಣ ನೀಡಲು ನಿರಾಕರಿಸಿದಾಗ ಮತ್ತೆ 1,500ರೂ. ನೀಡುವಂತೆ ಅರುಣ್ ಭಾಸ್ಕರ್ ಒತ್ತಾಯಿಸಿದ್ದ. ಇದರಿಂದ ನೊಂದ ಬಿ.ಕೆ. ರಾಘವ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅದರಂತೆ ಪೊನ್ನಂಪೇಟೆ ಕಚೇರಿಯ ಪ್ರಥಮ ದರ್ಜೆ ನೌಕರ ಅರುಣ್ ಭಾಸ್ಕರ್, ದೂರುದಾರ ಬಿ.ಕೆ. ರಾಘವ ಅವರಿಂದ 1,500ರೂ. ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಅರುಣ್ ಭಾಸ್ಕರ್‍ನನ್ನು ನಗದು ಸಹಿತ ಬಂಧಿಸಿದ್ದಾರೆ. ಆರೋಪಿಯಿಂದ 1,500 ರೂ.ಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಭ್ರಷ್ಟಾಚಾರ ನಿಗ್ರಹ ದಳದ ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಮಾರ್ಗದರ್ಶನದಲ್ಲಿ ಎಸಿಬಿ ಉಪ ಅಧೀಕ್ಷಕ ಸದಾನಂದ ತಿಪ್ಪಣ್ಣನವರ್, ವೃತ್ತ ನಿರೀಕ್ಷಕರಾದ ಶ್ರೀಧರ್, ಶಿಲ್ಪ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.