ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ : ಮಾಹಿತಿ ಪಡೆದ ಅನ್ಬುಕುಮಾರ್

12/11/2020

ಮಡಿಕೇರಿ ನ.12 : ಭಾವಚಿತ್ರ ಇರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಮತದಾರರ ಪಟ್ಟಿ ವೀಕ್ಷಕರಾಗಿ ನೇಮಕವಾಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಸಭೆ ನಡೆಯಿತು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ವಿ.ಅನ್ಬುಕುಮಾರ್ ಅವರು ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗದ ನಿರ್ದೇಶನ ಮತ್ತು ನಿಯಮದಂತೆ ನಡೆಸಬೇಕು. ಅರ್ಜಿ ನಮೂನೆ-6, 7, 8 ಮತ್ತು 8ಎ ರಂತೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕುವುದು, ಸ್ಥಳಾಂತರ ಬಗ್ಗೆ ಬಿಎಲ್‍ಒಗಳಿಂದ ನಿಖರ ಮಾಹಿತಿ ಪಡೆಯುವಂತೆ ಅವರು ಸಲಹೆ ಮಾಡಿದರು.
ಮತದಾರರ ಪಟ್ಟಿ ಸಂಬಂಧಿಸಿದಂತೆ ಯಾವುದೇ ದೂರುಗಳು ಬರದಂತೆ ಗಮನಹರಿಸಬೇಕು. ಚುನಾವಣಾ ಆಯೋಗದ ನಿರ್ದೇಶನಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಒಂದು ಮತಗಟ್ಟೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರು ಇದ್ದಲ್ಲಿ ಮಾಹಿತಿ ನೀಡುವಂತೆ ಅನ್ಬುಕುಮಾರ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 4,41,832 ಮತದಾರರು ಇದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 2,22,198 ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 2,18,157 ಮತದಾರರು ಇದ್ದಾರೆ. ಜೊತೆಗೆ 1,477 ಸೇವಾ ಮತದಾರರಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಕರಡು ಮತದಾರರ ಪಟ್ಟಿಯನ್ನು ನವೆಂಬರ್, 18 ರಂದು ಪ್ರಕಟಿಸಲಾಗುತ್ತದೆ. ನವೆಂಬರ್, 18 ರಿಂದ ಡಿಸೆಂಬರ್, 17 ರವರೆಗೆ ಮತದಾರರ ಪಟ್ಟಿ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಹಾಗೆಯೇ ನವೆಂಬರ್, 22, 29, ಡಿಸೆಂಬರ್, 06 ಮತ್ತು 13 ರಂದು ವಿಶೇಷ ಅಭಿಯಾನ ನಡೆಯಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್, ತಹಶೀಲ್ದಾರರಾದ ಗೋವಿಂದ ರಾಜು(ಸೋಮವಾರಪೇಟೆ), ಮಹೇಶ್(ಮಡಿಕೇರಿ), ನಂದೀಶ್(ವಿರಾಜಪೇಟೆ), ಚುನಾವಣಾ ವಿಭಾಗದ ಅನಿಲ್ ಕುಮಾರ್ ಅವರು ಹಲವು ಮಾಹಿತಿ ನೀಡಿದರು.