ವಿದ್ಯಾರ್ಥಿ ನಿಲಯಗಳ ಪ್ರವೇಶ ಆರಂಭ : ನಿಯಮ ಪಾಲಿಸಲು ಸೂಚನೆ

ಮಡಿಕೇರಿ ನ.12 : ಪ್ರಸಕ್ತ(2020-21) ಸಾಲಿಗೆ ಕೋವಿಡ್-19 ಲಾಕ್ಡೌನ್ ನಂತರ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳನ್ನು ಪುನರಾರಂಭಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕಿದೆ. ಈ ಹಿಂದೆ ವಿದ್ಯಾರ್ಥಿ ನಿಲಯಗಳನ್ನು ಕೋವಿಡ್-19 ಗೆ ಸಂಬಂಧಿಸಿದಂತೆ ಕ್ವಾರಂಟೈನ್ ಕೇಂದ್ರ/ ಆಶ್ರಯ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದರಿಂದ ಕೊರೊನಾ ವೈರಸ್ ರೋಗದ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ವಚ್ಛಗೊಳಿಸಲು ಇಲಾಖೆಯ ಶೇ.1 ಸೋಡಿಯಂ ಹೈಪೋಕ್ಲೂರೈಡ್ ದ್ರಾವಣವನ್ನು ಬಳಸಿ ವಿದ್ಯಾರ್ಥಿ ನಿಲಯದ ಕಟ್ಟಡವನ್ನು ಮತ್ತು ಆವರಣವನ್ನು ಸ್ಯಾನಿಟೈಸೇಷನ್ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಅದೇ ರೀತಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಥರ್ಮಲ್ ಸ್ಕ್ಯಾನರ್, ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು ವಿದ್ಯಾರ್ಥಿನಿಲಯಗಳಿಗೆ ಒದಗಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ನಿರಾಂತಂಕವಾಗಿ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆದುಕೊಳ್ಳಬಹುದಾಗಿದೆ. ಪ್ರವೇಶ ಪಡೆಯ ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಷಕರ ಒಪ್ಪಿಗೆ ಪತ್ರದೊಂದಿಗೆ ಕೋವಿಡ್-19ರ ಹಿನ್ನೆಲೆಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಹಾಜರಾಗುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಮಡಿಕೇರಿ ಇಲ್ಲಿನ ಕಚೇರಿ ದೂ.ಸಂ.08272-223552 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
