ಬ್ಯಾಂಕ್‍ಗಳಲ್ಲಿ ಭಾಷಾ ನೀತಿ ಉಲ್ಲಂಘನೆ

12/11/2020

ಬೆಂಗಳೂರು ನ.12 : ಕೆನರಾ ಬ್ಯಾಂಕ್ ಸೇರಿದಂತೆ ಕರ್ನಾಟಕದಲ್ಲಿರುವ ಬಹುತೇಕ ಬ್ಯಾಂಕ್ ಗಳು ರಾಜ್ಯ ಸರ್ಕಾರದ ಭಾಷಾನೀತಿಯನ್ನು ಉಲ್ಲಂಘಿಸುತ್ತಿದ್ದು, ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಕರ್ನಾಟಕ ರಾಜ್ಯ ಬ್ಯಾಂಕರುಗಳ -ಎಸ್.ಎಲ್.ಬಿ.ಸಿ ಸಮಿತಿಗೆ ತಾಕೀತು ಮಾಡಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳು, ನೇಮಕಾತಿ ಪ್ರಕ್ರಿಯೆ ಹಾಗೂ ಆಡಳಿತದಲ್ಲಿನ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತು ವಿಧಾನಸೌಧದಲ್ಲಿಂದು ಜಾಲಸಂಪರ್ಕ ಸಭೆ ನಡೆಸಿದ ಅಧ್ಯಕ್ಷರು, ಬ್ಯಾಂಕುಗಳಲ್ಲಿ ಸಿ ಮತ್ತು ಡಿ ಹುದ್ದೆಯಲ್ಲಿರುವ ಕನ್ನಡ ಬಾರದ ಕನ್ನಡೇತರರ ಮೇಲೆ ಇದೂವರೆವಿಗೂ ಯಾವುದೇ ಕ್ರಮ ಕೈಗೊಂಡಿಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡೇತರರು ನೇಮಕಾತಿ ಆದ 6 ತಿಂಗಳಿನಲ್ಲಿ ಕನ್ನಡವನ್ನು ಓದಲು ಮತ್ತು ಬರೆಯಲು ಕಲಿತು ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ಸಂವಹನ ನಡೆಸಬೇಕು. ಈ ಬಗ್ಗೆ ಭಾಷಾನೀತಿಯ ಆದೇಶದಲ್ಲೇ ಉಲ್ಲೇಖವಿದ್ದರೂ ನೇಮಕಾತಿ ಆಗಿ 5-6 ವರ್ಷ ಕಳೆದರೂ ಕನ್ನಡ ಕಲಿಯದ ನೌಕರರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ಈಗಲಾದರೂ ಕನ್ನಡ ಬಾರದ ಅಧಿಕಾರಿಗಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕು, ಇಲ್ಲವೇ ಅವರನ್ನು ಬಿಡುಗಡೆಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದರು.