ದಕ್ಷಿಣ ಭಾರತದ ಅಯೋಧ್ಯೆಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಶ್ರೀ ರಾಮ ಕ್ಷೇತ್ರ

12/11/2020

ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದಲ್ಲಿ ನೆಲೆ ನಿಂತಿರುವ, ದಕ್ಷಿಣ ಭಾರತದ ಅಯೋಧ್ಯೆಯೆಂದೇ ಪ್ರಖ್ಯಾತಿಯನ್ನು ಪಡೆದಿರುವ ಶ್ರೀ ರಾಮ ಕ್ಷೇತ್ರ ಈಗ ಭಕ್ತರ ಜನಾಕರ್ಷಣೆಯ ಪ್ರಮುಖ ಶ್ರದ್ಧಾ ಕೇಂದ್ರ. ಕ್ಷೇತ್ರವು ಧರ್ಮಸ್ಥಳ ಮಂಗಳೂರು ಹೆದ್ದಾರಿಯಲ್ಲಿ ಧರ್ಮಸ್ಥಳದಿಂದ ೪ ಕಿ.ಮೀ ದೂರದಲ್ಲಿದ್ದರೆ, ಕರಾವಳಿಯ ನಗರ ಮಂಗಳೂರಿನಿಂದ ಕೇವಲ ೬೭ ಕಿ.ಮೀ ದೂರದಲ್ಲಿದೆ. ಪವಿತ್ರ ನದಿ ನೇತ್ರಾವತಿಗೆ ತೀರಾ ಸಮೀಪದಲ್ಲಿರುವುದು ಇದರ ವಿಶೇಷತೆಗಳಲ್ಲೊಂದು. ದಕ್ಷಿಣೋತ್ತರ ಶಿಲ್ಪಕಲಾ ಶೈಲಿಯಯಲ್ಲಿ ಕಂಗೊಳಿಸುತ್ತಿರುವ ಶ್ರೀ ರಾಮ ಕ್ಷೇತ್ರಕ್ಕೆ ಇಂದು ದೇಶ – ವಿದೇಶಗಳಿಂದ ಲಕ್ಷಾಂತರ ಮಂದಿ ಭಕ್ತರು ಬಂದು ‘ಶ್ರೀ ರಾಮ’ನ ದರ್ಶನವನ್ನು ಪಡೆದು ಪುನೀತರಾಗುತ್ತಿದ್ದಾರೆ.

ಇತಿಹಾಸ
ಶ್ರೀ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಈ ದೇವಸ್ಥಾನ ಸಂಕೀರ್ಣದ ನಿರ್ಮಾತೃ. ಅವರು ಶ್ರೀ ನಿತ್ಯಾನಂದ ಸ್ವಾಮೀಜಿಯವರ ಶಿಷ್ಯರಾಗಿದ್ದರು. ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಮುಂಬೈನ ‘ಥಾಣೆಯ ಗಣೇಶ್‍ ಪುರಿ’ಯಲ್ಲಿ ತಮ್ಮ ಪಾಠವನ್ನು ೧೯೩೭ ರಿಂದ ೧೯೬೧ರ ಮಧ್ಯೆ ಅಭ್ಯಸಿಸಿದರು(ಶ್ರೀ ನಿತ್ಯಾನಂದ ಸ್ವಾಮೀಜಿಗಳ ಸಮಾಧಿಯವರೆಗೆ). ಅಭ್ಯಾಸದ ಸಂದರ್ಭದಲ್ಲಿ ಅವರ ಗುರುಗಳಾದ ಶ್ರೀ ನಿತ್ಯಾನಂದ ಸ್ವಾಮೀಜಿಯವರು ಧರ್ಮಸ್ಥಳ ಗ್ರಾಮದಲ್ಲಿ ರಾಮನ ದೇವಸ್ಥಾನದ ರಚನೆ ಮಾಡಬೇಕೆಂಬ ತಮ್ಮ ಬಯಕೆಯನ್ನು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ತಿಳಿಸಿದರು. ವಿಶೇಷವಾದ ಪವಾಡ ಶಕ್ತಿಯನ್ನು ಹೊಂದಿದ್ದ ಶ್ರೀ ನಿತ್ಯಾನಂದ ಸ್ವಾಮಿಗಳು ತಮ್ಮ ಧರ್ಮಸ್ಥಳ ಯಾತ್ರೆಯ ಸಂದರ್ಭದಲ್ಲಿ ಒಂದು ದಿನ ಇಲ್ಲಿ ತಂಗಿದ್ದರು, ಅವರಿಗೆ ಆ ಸಂದರ್ಭದಲ್ಲಿ ಈ ಸ್ಥಳದಲ್ಲಿ ದೇವ ಶ್ರೀ ರಾಮನ ಮಂದಿರವನ್ನು ನಿರ್ಮಾಣ ಮಾಡಬೇಕೆಂಬ ಯೋಚನೆ ಬಂದಿತು. ಅದರ ಅನ್ವಯ ತಮ್ಮ ಗುರುಗಳ ಬಯಕೆಯಂತೆ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಧರ್ಮಸ್ಥಳ ಗ್ರಾಮಕ್ಕೆ ೧೯೬೯ರಲ್ಲಿ ಬಂದು, ತಮ್ಮ ಗುರುಗಳ ಬಯಕೆಯನ್ನು ಈಡೇರಿಸಲು ಪ್ರಯತ್ನಪಟ್ಟರು. ಅವರು ಶ್ರೀ ರಾಮ ಕ್ಷೇತ್ರದ ಸ್ಥಳವನ್ನು ೧೯೭೧ರಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದ ಶಾನುಭಾಗರಾಗಿದ್ದ (ಗ್ರಾಮ ಲೆಕ್ಕಿಗ) ಸೂರ್ಯ ನಾರಾಯಣ ರಾವ್ ದೊಂಡೋಲೆ ಇವರಿಂದ ಬಳುವಳಿಯಾಗಿ ಪಡೆದರು. ಅವರು ಹುಲ್ಲು ಛಾವಣಿಯಿಂದ ನಿರ್ಮಿತ ಕಟ್ಟಡ ಪಡೆದು ಅದರಲ್ಲಿ “ಭಗವಾನ್ ಶ್ರೀ ನಿತ್ಯಾನಂದ ಮಂದಿರ”ವನ್ನು ಆರಂಭಿಸಿದರು. ತಕ್ಷಣ ಭಕ್ತರು ಅಲ್ಲಿ ಸೇರಲು ಆರಂಭಿಸಿದರು. ನಂತರ ಪ್ರತಿವರ್ಷ “ರಾಮ ನವಮಿ”ಯ ಹಬ್ಬದ ಸಂದರ್ಭದಲ್ಲಿ ಇಲ್ಲಿ ಏಳು ದಿನಗಳ “ರಾಮ ಭಜನಾ ಸಪ್ತಾಹ”ವನ್ನು ಆರಂಭಿಸಲಾಯಿತು. ಸ್ಥಳೀಯ ಹಾಗೂ ದೂರದ ಊರಿನಿಂದ ಸಾವಿರಾರು ಶ್ರೀ ರಾಮನ ಭಕ್ತರು ಬಂದು ಸೇರಿ ”ನಂದಾ ದೀಪ”ದ ಸುತ್ತಲೂ ಕುಣಿಯುತ್ತಾ ರಾಮ ತಾರಕ ಮಂತ್ರದ ಜಪ ಮಾಡಲು ಆರಂಭಿಸಿದರು.

ಇಂದು ಪವಿತ್ರ ಕ್ಷೇತ್ರವೆಂದು ಕರೆದುಕೊಳ್ಳುವ ಶ್ರೀ ರಾಮ ಕ್ಷೇತ್ರದಲ್ಲಿ ೧೯೭೮ರವರೆಗೆ ಸಣ್ಣ ನಿತ್ಯಾನಂದ ಮಂದಿರವನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಪ್ರಸ್ತುತ ಶ್ರೀ ರಾಮ ದೇವಸ್ಥಾನಕ್ಕೆ ೧೯೭೮ರಲ್ಲಿ ಬೆಂಗಳೂರಿನ ಶ್ರೀ ಶ್ರೀ ಶಿವ ಬಾಲಯೋಗಿ ಮಹರಾಜರು ಭೂಮಿಪೂಜೆ ನೆರವೇರಿಸಿದರು. ನಂತರ ಎರಡು ಎಕ್ರೆಯಲ್ಲಿನ ರಾಮ ಮಂದಿರದ ರಚನೆಯನ್ನು ಶ್ರೀ ಆತ್ಮಾನಂದ ಸ್ವಾಮೀಜಿಗಳು ನಿರ್ದೇಶಿಸಿದರು. ಅಲ್ಲಿಂದ ದೇವಾಲಯದ ನಿರ್ಮಾಣ ಕಾರ್ಯ ಭರದಿಂದ ಸಾಗಿತು. ೨೦೦೭ರಲ್ಲಿ ಈ ಕ್ಷೇತ್ರದ ‘ಪ್ರತಿಷ್ಠಾ ಬ್ರಹ್ಮಕಲಶೋತ್ಸವ’ವನ್ನು ಅದ್ದೂರಿಯಾಗಿ ೫೪ ದಿನಗಳ ಕಾಲ ನಡೆಯಿತು. ಇದೇ ಸಂದರ್ಭದಲ್ಲಿ ಎಲ್ಲಾ ೩೬ ದೇವರ ಗರ್ಭಗುಡಿಗಳು ಹಾಗೂ ರಾಮ ದೇವರ ‘ಪೂಜಾ ಸ್ಥಳ’ವನ್ನು ಏಕಕಾಲದಲ್ಲಿ ವಿಧ್ಯುಕ್ತವಾಗಿ ಆರಂಭಿಸಲಾಯಿತು. ಶ್ರೀ ರಾಮ ಇಲ್ಲಿನ ಮುಖ್ಯ ದೇವರಾಗಿದ್ದು, ಒಂದೇ ಸೂರಿನಡಿಯಲ್ಲಿ ಇತರ ೩೬ ದೇವರುಗಳ ಗರ್ಭಗುಡಿಗಳಿವೆ. ೩೦ ವರ್ಷಗಳ ಹಿಂದೆ ದೇವಸ್ಥಾನ ಇಷ್ಟೊಂದು ಜನಪ್ರಿಯವಾಗುತ್ತದೆಂದು ಯಾರೊಬ್ಬರೂ ಎಣಿಸಿರಲಾರರು, ಅಷ್ಟರ ಮಟ್ಟಿಗೆ ಇಂದು ಜನಪ್ರಿಯವಾಗಿದೆ.

ಪೌರಾಣಿಕ ಉಲ್ಲೇಖ
ಸೀತಾನ್ವೇಷಣೆಯ ಸಂದರ್ಭದಲ್ಲಿ ಕೆಲವು ಕಾಲ ಶ್ರೀ ರಾಮಚಂದ್ರ ಈ ಸ್ಥಳದಲ್ಲಿ ತಂಗಿದ್ದ ಎಂಬ ಪ್ರತೀತಿಯೂ ಇದೆ.