ನೆಲ್ಯಹುದಿಕೇರಿಯಲ್ಲಿ ಗ್ರಾಮೀಣ ರೈತ ಹಾಗೂ ಮಹಿಳಾ ಉತ್ಪನ್ನಗಳ ಮಾರಾಟ ಕೇಂದ್ರ ಪ್ರಾರಂಭ

ಮಡಿಕೇರಿ, ನ. 12 : ಮಹಿಳೆಯರು ಸ್ವಉದ್ಯೋಗದಿಂದ ಸ್ವಾವಲಂಬಿಗಳಾಗಿ ಅಭಿವೃದ್ಧಿ ಮೂಲಕ ಸಮಾಜದ ಮುಖ್ಯವಾಹಿನಿಗೆ
ಬರಬೇಕೆಂದು ಬೆಂಗಳೂರು ನಬಾರ್ಡ್ ಮುಖ್ಯ ಪ್ರಬಂಧಕ ನೀರಜ್ಕುಮಾರ್ ವರ್ಮ ಕರೆ ನೀಡಿದರು.
ನೆಲ್ಯಹುದಿಕೇರಿಯಲ್ಲಿ ಗ್ರಾಮೀಣರೈತ ಹಾಗೂ ಮಹಿಳಾ ಉತ್ಪನ್ನಗಳ ಮಾರಾಟ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪ ಸಂದರ್ಭದಲ್ಲಿ ಮಹಿಳೆಯರು ಸಂಕಷ್ಟದಲ್ಲಿರುವುದನ್ನು ಮನಗಂಡು ನಬಾರ್ಡ್ ಸಂಸ್ಥೆ ಓಡಿಪಿ ಸಂಸ್ಥೆಯ ಮೂಲಕ ತರಬೇತಿ ಹಾಗೂ ಹಲವು ಯೋಜನೆಗಳನ್ನು ನೀಡಿ ಸ್ವಉದ್ಯೋಗದ ಮೂಲಕ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರಮಿಸಿದೆ. ಮಹಿಳೆಯರನ್ನು ಒಗ್ಗೂಡಿಸಿ ಸಂಘಟನೆಯ ಮೂಲಕ ವಿವಿಧ ಕೌಶಲ್ಯಭಿವೃದ್ಧಿಯೊಂದಿಗೆ ಮುಂದೆತರುವ ಪ್ರಯತ್ನಕ್ಕೆ ಓಡಿಪಿ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಪಿ.ವಿ ಶ್ರೀನಿವಾಸ್ ಮಾತನಾಡಿ, ಮಹಿಳೆಯರಿಗೆ ಕೌಶಲ್ಯಅಭಿವೃದ್ಧಿಯ ತರಬೇತಿಗಳನ್ನು ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆದುಕೊಂಡ ಮಹಿಳೆಯರು ಅಭಿವೃದ್ಧಿಯಲ್ಲಿ ಮುಂದಿದ್ದಾರೆ. ತಾವು ತಯಾರು ಮಾಡಿದ ಆಹಾರ ಪದಾರ್ಥಗಳು, ಬಟ್ಟೆ ಇನ್ನಿತರ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ನಬಾರ್ಡ್ ಸಂಸ್ಥೆ. ಓಡಿಪಿ ಸಂಸ್ಥೆಯ ಸಹಕಾರದೊಂದಿಗೆ ಮಹಿಳೆಯರ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಪ್ರಾರಂಭ ಮಾಡಲಾಗಿದೆ.
ಎರಡು ವರ್ಷದವರೆಗೆ ಮಾರಾಟ ಕೇಂದ್ರಕ್ಕೆ ಸಹಕಾರ ನೀಡಲಾಗುತ್ತಿದ್ದು, ಇದರ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗಲಿದೆ ಎಂದರು.
ನಬಾರ್ಡ್ ಸಂಸ್ಥೆಯ ನಿವೃತ್ತ ಅಧಿಕಾರಿ ನಾಣಯ್ಯ ಮಾತನಾಡಿ ಪ್ರಾಕೃತಿ ವಿಕೋಪ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿದ್ದ ಮಹಿಳೆಯರಿಗೆ ನಬಾರ್ಡ್ ಮೂಲಕ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಇದೀಗ ಅಭಿವೃದ್ಧಿಕಾಣಲು ಸಾಧ್ಯವಾಗಿದೆ. ಸೋಮವಾರಪೇಟೆ ತಾಲೂಕಿನ ವಣಚಲು ಗ್ರಾಮದಲ್ಲಿ ಸೋಲರ್ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಜೇನು ಸಾಕಾಣಿಕೆ ಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಅಭಿವೃದ್ಧಿಯ ಮೂಲಕ ಮುಂದಿದ್ದಾರೆ ಎಂದರು.
ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದಲೂ ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಓಡಿಪಿ ಸಂಸ್ಥೆ ಮಹಿಳೆಯರನ್ನು ಒಗ್ಗೂಡಿಸಿ ಅಭಿವೃದ್ಧಿಯ ಮೂಲಕ ಮುಂದೆತರಲು ಶ್ರಮಿಸಿದೆ. ನಬಾರ್ಡ್ ಹಾಗೂ ಕಾಪ್ಸ್ ಸಂಸ್ಥೆಯ ಸಹಕಾರದೊಂದಿಗೆ ಮಹಿಳೆಯರು ತಮ್ಮದುಡಿಮೆಯಲ್ಲಿ ಮುಂದೆ ಬರಲು ಹಲವಾರು ಕೌಶಲ್ಯ ತರಬೇತಿಗಳನ್ನು ನೀಡಲಾಗಿದೆ.
ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಗ್ರಾಮೀಣ ಮಾರಾಟ ಮಳಿಗೆಯನ್ನು ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ಸಂತ್ರಸ್ತರ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿ ಸಹಕಾರ ನೀಡಿದಲ್ಲಿ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗಲಿದ್ದು ಎಲ್ಲರೂ ಕೈ ಜೋಡಿಸಬೇಕೆಂದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಅಣ್ಣಯ್ಯ, ಗ್ರಾ. ಪಂ. ಮಾಜಿ ಉಪಾಧ್ಯಕ್ಷೆ ಸಫಿಯ ಮೊಹಮ್ಮದ್, ಮೈಸೂರು ಓಡಿಪಿ ಸಂಸ್ಥೆಯ ಮಹಿಳಾ ಅಭಿವದ್ಧಿ ಯೋಜನಾ ಸಂಯೋಜಕಿ ಮೋಲಿ ಪುಡ್ತಾದೊ,
ಮಹಿಳೋದಯ ಮಹಿಳಾ ಒಕ್ಕೂಟದ ಜಿಲ್ಲಾಅಧ್ಯಕ್ಷ ಬಿ. ಎಂ ಭಾರತಿ, ಓಡಿಪಿ ಸಂಸ್ಥೆಯ ವಲಯ ಸಂಯೋಜಕಿ ಜಾಯ್ಸ್ ಮೆನೇಜಸ್ , ಕಾರ್ಯಕರ್ತೆ ವಿಜಯನಾರಾಯಣ ಸೇರಿದಂತೆ ಮತ್ತಿತರರು ಇದ್ದರು.



