ಕರಿಕೆ ರಸ್ತೆ ಅಭಿವೃದ್ಧಿಗೆ ಆಗ್ರಹ : ಪ್ರತಿಭಟನೆಯ ಎಚ್ಚರಿಕೆ ನೀಡಿದ ಕಾಂಗ್ರೆಸ್

12/11/2020

ಮಡಿಕೇರಿ ನ.12 : ಸಂಪೂರ್ಣವಾಗಿ ಹದಗೆಟ್ಟಿರುವ ಕರಿಕೆ- ಭಾಗಮಂಡಲ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ಹದಿನೈದು ದಿನಗಳೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕರಿಕೆ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಕರಿಕೆ ಗ್ರಾ.ಪಂ ಮಾಜಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಿಕೆ-ಭಾಗಮಂಡಲ ಮುಖ್ಯ ರಸ್ತೆಯು ಅಂತರರಾಜ್ಯ ರಸ್ತೆಯಾಗಿದೆ. ಭಾಗಮಂಡಲದಿಂದ ಕರಿಕೆ ಗ್ರಾಮದ ಮೂಲಕ ಕೇರಳಕ್ಕೆ ಹೋಗುವ ರಸ್ತೆಯು 30 ಕಿ.ಮೀ. ಉದ್ದಕ್ಕೂ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಈ ಮೊದಲು ಮಾಡಿದ ಮನವಿ ಮತ್ತು ಪ್ರತಿಭಟನೆಗಳಿಗೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ದೊರೆಯದ ಕಾರಣ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಕರಿಕೆ-ಭಾಗಮಂಡಲ ರಸ್ತೆಯಲ್ಲಿ ನಿರಂತರ ವಾಹನ ಸಂಚಾರವಿದ್ದು, ಚೆತ್ತುಕಾಯದಿಂದ ಚೆಂಬೇರಿಯವರೆಗೆ ನಿತ್ಯ ಸಂಚಾರ ಮಾಡಲು ಕರಿಕೆ ಗ್ರಾಮಸ್ಥರು ಹರಸಹಾಸ ಪಡುವಂತಾಗಿದೆ. ಈ ರಸ್ತೆ ಕೊಡಗು, ಕರ್ನಾಟಕದ ಪ್ರವಾಸೋದ್ಯಮ ಪ್ರಮುಖ ಕೊಂಡಿಯಾಗಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2004ರ ಮೊದಲು ಎಂ.ಎಂ.ನಾಣಯ್ಯ ಅವರು ಮಂತ್ರಿಯಾಗಿದ್ದಾಗ ಚೆಂಬೇರಿಯಿಂದ ಸುಮಾರು 5 ಕಿ.ಮೀ ರಸ್ತೆ ವಿಸ್ತರಣೆ ನಡೆದಿತ್ತು. ಆ ನಂತರ ಇಲ್ಲಿಯವರೆಗೆ ರಸ್ತೆ ವಿಸ್ತರಣೆಯಾಗಿಲ್ಲ. 2018-19ರ ರಸ್ತೆಯ ವಾರ್ಷಿಕ ನಿರ್ವಹಣೆ ಕೂಡ ಸಮರ್ಪಕವಾಗಿ ನಡೆದಿಲ್ಲ. ಕಾವೇರಿ ತುಲಾ ಸಂಕ್ರಮಣದ ಸಂದರ್ಭದಲ್ಲಿ ರಸ್ತೆಯ ಕಾಡನ್ನು ಕಡಿಯಲಾಗುತ್ತಿತ್ತು. ಆದರೆ ಪ್ರಸ್ತುತ ವರ್ಷ ಈ ಕಾರ್ಯ ನಡೆದಿಲ್ಲ. ಮಳೆಗಾಲದಲ್ಲಿ ಕುಸಿದ ಮಣ್ಣು ಮತ್ತು ಬಿದ್ದ ಮರಗಳನ್ನು ರಸ್ತೆಯಿಂದ ಇದುವರೆಗೆ ತೆರವುಗೊಳಿಸಿಲ್ಲ ಎಂದು ಟೀಕಿಸಿದರು.
ಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸದೆ ಹಣ ಪಡೆದಿರುವ ಉದಾಹರಣೆಗಳಿದ್ದು, ಪ್ರತಿ ವರ್ಷ ಗುತ್ತಿಗೆ ಪಡೆದವರೇ ಪಡೆಯುತ್ತಿದ್ದಾರೆ. ಜಿ.ಪಂ ಸದಸ್ಯರೊಬ್ಬರ ಪತಿಯೇ ಗುತ್ತಿಗೆದಾರರಾಗಿರುವುದರಿಂದ ಶಾಸಕರು ಕೂಡ ಪ್ರಶ್ನೆ ಮಾಡುತ್ತಿಲ್ಲವೆಂದು ಬಾಲಚಂದ್ರ ನಾಯರ್ ಆರೋಪಿಸಿದರು.
ಕರಿಕೆ ರಸ್ತೆ ಎಲ್ಲಿದೆ, ಹೇಗಿದೆ ಎಂದೇ ತಿಳಿಯದ ಕೊಡಗಿನ ಸಂಸದರು ಎಲ್ಲೋ ಕುಳಿತು ಪಾಣತ್ತೂರು-ಕರಿಕೆ-ಭಾಗಮಂಡಲ ರಸ್ತೆ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ರಸ್ತೆಯಾಗಿ ಅಭಿವೃದ್ಧಿಯಾಗಲಿದೆ ಎಂದು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಕನಿಷ್ಠ ರಸ್ತೆ ದುರಸ್ತಿ ಕಾರ್ಯ ಕೂಡ ನಡೆದಿಲ್ಲವೆಂದು ಟೀಕಿಸಿದರು.
ಕಾಞಂಗಾಡ್‍ನಿಂದ ಪಾಣತ್ತೂರ್‍ವರೆಗೆ ಡಿಪಿಆರ್ ಸರ್ವೆ ನಡೆದಿದ್ದು, ಕರಿಕೆಯಿಂದ-ಮಡಿಕೇರಿವರೆಗೆ ಸರ್ವೆಯೇ ನಡೆದಿಲ್ಲ. ಇದಕ್ಕೆ ಸಂಸದರ ಅಸಡ್ಡೆಯೇ ಕಾರಣವೆಂದು ಆರೋಪಿಸಿದರು.
ಕಳೆದ 16 ವರ್ಷಗಳಿಂದ ಕೆ.ಜಿ.ಬೋಪಯ್ಯ ಅವರು ಈ ಭಾಗದ ಶಾಸಕರಾಗಿದ್ದರೂ ರಸ್ತೆ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ರಸ್ತೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸದೆ ಶಾಸಕರು ಗ್ರಾಮವನ್ನು ಪ್ರವೇಶಿಸಿದರೆ ಕಪ್ಪು ಬಾವುಟ ಪ್ರದರ್ಶಿಸಿ ಅಸಮಾಧಾನ ವ್ಯಕ್ತಪಡಿಸುವುದಾಗಿ ಎನ್.ಬಾಲಚಂದ್ರ ನಾಯರ್ ತಿಳಿಸಿದರು.
::: ಅಚ್ಛೇ ದಿನ್ ಬಂದಿಲ್ಲ :::
ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ರಮಾನಾಥ್ ಮಾತನಾಡಿ ಕಳೆದ 16 ವರ್ಷಗಳಿಂದ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಜಿ.ಬೋಪಯ್ಯ ಅವರು ಕರಿಕೆ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಶಾಸಕರಿಗೆ ಅಚ್ಛೇ ದಿನ್ ಬಂದಿದೆ, ಆದರೆ, ಕರಿಕೆ ಜನರಿಗೆ ಯಾವಾಗ ಅಚ್ಛೇ ದಿನ್ ಬರುತ್ತದೆ ಎಂಬುವುದನ್ನು ಶಾಸಕರೇ ಹೇಳಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕರಿಕೆ ರಸ್ತೆಯು ಇಂಜಿನಿಯರ್‍ಗಳಿಗೆ ಆದಾಯ ಗಳಿಕೆಗೆ ಸುಗ್ಗಿ ಬೇಸಾಯದ ರಸ್ತೆಯಂತಾಗಿದ್ದು, ವರ್ಷಕ್ಕೆ ಮೂರು ಬಾರಿ ದುರಸ್ತಿ ಕಾರ್ಯದ ನಾಟಕವಾಡಲಾಗುತ್ತಿದೆ. ಆಗದಿರುವ ಕಾಮಗಾರಿಗಳಿಗೆ ಕೂಡ ಬಿಲ್ ಮಾಡಿರುವ ಪ್ರಕರಣಗಳು ಕಂಡು ಬಂದಿದೆ ಎಂದು ರಮಾನಾಥ್ ಆರೋಪಿಸಿದರು ಆರೋಪಿಸಿದರು.
ಈ ಭಾಗದ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಮಾತ್ರವಲ್ಲದೆ ಪಾದಾಚಾರಿಗಳಿಗೂ ಸಂಚರಿಸಲು ಸಾಧ್ಯವಾಗುತ್ತಿಲ್ಲವೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರಿಕೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಡಿ.ದೇವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಜೆ.ಶರಣ್ ಕುಮಾರ್ ಹಾಗೂ ಗ್ರಾ.ಪಂ ಮಾಜಿ ಸದಸ್ಯ ಬಿ.ಕೆ.ಪುರುಷೋತ್ತಮ ಉಪಸ್ಥಿತರಿದ್ದರು.