ತಲಕಾವೇರಿ ಇಂಗು ಗುಂಡಿಗಳನ್ನು ಮುಚ್ಚದಿದ್ದಲ್ಲಿ ಪ್ರತಿಭಟನೆ : ಜೆಡಿಎಸ್ ಎಚ್ಚರಿಕೆ

November 12, 2020

ಮಡಿಕೇರಿ ನ.12 : ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಲು ಕಾರಣವಾಗಿರುವ ಇಂಗು ಗುಂಡಿಗಳನ್ನು ಅರಣ್ಯ ಇಲಾಖೆ ತಕ್ಷಣ ಮುಚ್ಚದಿದ್ದಲ್ಲಿ ಜಿಲ್ಲಾ ಜಾತ್ಯತೀತ ಜನತಾದಳದ ವತಿಯಿಂದ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸ್ತುತ ವರ್ಷ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬ ಅಸುನೀಗಲು ಅರಣ್ಯ ಇಲಾಖೆ ನಿರ್ಮಿಸಿರುವ ಇಂಗು ಗುಂಡಿಗಳೇ ಕಾರಣವಾಗಿದ್ದು, ದುರ್ಘಟನೆಗೆ ಅರಣ್ಯ ಇಲಾಖೆಯೇ ನೇರ ಹೊಣೆ ಎಂದು ಆರೋಪಿಸಿದರು. ಮತ್ತೊಂದು ಅನಾಹುತ ಸಂಭವಿಸುವ ಮೊದಲು ಇಂಗು ಗುಂಡಿಗಳನ್ನು ಮುಚ್ಚಬೇಕೆಂದು ಒತ್ತಾಯಿಸಿದರು.
ಬೆಟ್ಟದ ಮೇಲೆ ಸುಮಾರು 5,400 ಇಂಗು ಗುಂಡಿಗಳನ್ನು ತೆಗೆದಿದ್ದು, ಇದರಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ಇದೆಯೆಂದು ಆರೋಪಿಸಿದರು. ಇಂಗು ಗುಂಡಿಗಳನ್ನು ಮುಚ್ಚದಿದ್ದಲ್ಲಿ ಮುಂದಿನ ವರ್ಷ ಬ್ರಹ್ಮಗಿರಿ ಬೆಟ್ಟಕ್ಕೂ ಅಪಾಯ ಎದುರಾಗಲಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಅರ್ಧ ಭಾಗಮಂಡಲ ಗ್ರಾಮ ನಿರ್ನಾಮವಾಗುವ ಸಾಧ್ಯತೆಗಳಿದೆ ಎಂದು ಗಣೇಶ್ ಆತಂಕ ವ್ಯಕ್ತಪಡಿಸಿದರು.
ಪವಿತ್ರ ಕ್ಷೇತ್ರ ಭಾಗಮಂಡಲದಲ್ಲಿ ಸಾವಿರಾರು ಇಂಗು ಗುಂಡಿಗಳನ್ನು ಅರಣ್ಯ ಇಲಾಖೆ ನಿರ್ಮಿಸುತ್ತಿದ್ದಾಗ ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಪರಿಸರವಾದಿಗಳು ಜಾಣ ಮೌನಕ್ಕೆ ಶರಣಾಗಿದ್ದು ಯಾಕೆ ಎಂದು ಅವರು ಪ್ರಶ್ನಿಸಿದರು. ಸ್ಥಳೀಯ ಜನರ ಅಭಿಪ್ರಾಯ ಮತ್ತು ಜಿಲ್ಲಾಡಳಿತದ ಅನುಮತಿ ಪಡೆಯದೆ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಜೆಸಿಬಿ ಯಂತ್ರಗಳ ಮೂಲಕ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ಅನಾಹುತಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
::: ರಾಜಾಸೀಟ್‍ನಲ್ಲಿ ಕಾಮಗಾರಿ ಬೇಡ :::
ಬೆಟ್ಟಗುಡ್ಡಗಳಲ್ಲಿ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ನಡೆಸಬಾರದೆಂದು ಸೂಚನೆ ಇದ್ದರು, ನೈಜ ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ರಾಜಾಸೀಟ್ ಉದ್ಯಾನವನದಲ್ಲಿ ಕೂಡ ಯಂತ್ರಗಳನ್ನು ಬಳಸಿ ಬೆಟ್ಟವನ್ನು ಕೊರೆಯಲಾಗುತ್ತಿದೆ. ಇದನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ನೈಜ ಸೌಂದರ್ಯಕ್ಕೆ ಧಕ್ಕೆ ತರುವ ಬದಲು ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಗಣೇಶ್ ಒತ್ತಾಯಿಸಿದರು.
::: ಲಿಂಗ ವಿಸರ್ಜಿಸಿ :::
ತಲಕಾವೇರಿಯಲ್ಲಿರುವ ಅಗಸ್ತ್ಯ ಮುನಿಗಳು ಸ್ಥಾಪಿಸಿದ ಹಾನಿಗೀಡಾದ ಲಿಂಗ ಮತ್ತು ಪ್ರಸ್ತುತ ಪೂಜಿಸಲ್ಪಡುತ್ತಿರುವ ಲಿಂಗ ಇವುಗಳೆರಡರಲ್ಲಿ ಯಾವುದಾದರೊಂದನ್ನು ವಿಸರ್ಜಿಸುವ ಮೂಲಕ ದೋಷ ನಿವಾರಣೆಗೆ ಮುಂದಾಗಬೇಕೆಂದು ಅವರು ಇದೇ ಸಂದರ್ಭ ಮನವಿ ಮಾಡಿದರು.
ಜೆಡಿಎಸ್ ಹಿರಿಯ ಉಪಾಧ್ಯಕ್ಷ ಪಾಣತ್ತಲೆ ವಿಶ್ವನಾಥ್ ಮಾತನಾಡಿ, ಜಾತ್ಯತೀತವಾಗಿ ನಾಡಿನ ಎಲ್ಲಾ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿ ಪವಿತ್ರವಾದ ಸಪ್ತ ನದಿಗಳಲ್ಲಿ ಒಂದೆಂದು ಹೆಸರುವಾಸಿಯಾಗಿದ್ದು, ಕಾವೇರಿ ಹುಟ್ಟುವ ಕ್ಷೇತ್ರದಲ್ಲಿ ಇಂಗುಗುಂಡಿಯನ್ನು ನಿರ್ಮಿಸುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ತಲಕಾವೇರಿಯಲ್ಲಿರುವ ಬೆಟ್ಟಸಾಲುಗಳು ಕೇರಳಕ್ಕೆ ಸಮೀಪವಾಗಿರುವುದರಿಂದ ಯಾವುದೇ ಹವಾಗುಣ ವೈಫರೀತ್ಯ ಸಂಭವಿಸಿದರು ಅದು ತಲಕಾವೇರಿ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, 250 ರಿಂದ 300 ಇಂಚು ಮಳೆ ಬೀಳುವ ಈ ಪ್ರದೇಶದಲ್ಲಿ ಇಂಗು ಗುಂಡಿ ನಿರ್ಮಾಣದಿಂದ ಬೆಟ್ಟ ಕುಸಿಯುವ ಸಾಧ್ಯತೆಯೇ ಹೆಚ್ಚೆಂದು ಅವರು ಹೇಳಿದರು.
ಅಗಸ್ತ್ಯ ಮುನಿಗಳು ಸ್ಥಾಪಿಸಿದ ಲಿಂಗವನ್ನು ಎಲ್ಲೋ ಒಂದು ಕಡೆ ಇಟ್ಟು ನಿರ್ಲಕ್ಷಿಸಿರುವುದು ಸರಿಯಾದ ಕ್ರಮವಲ್ಲ. ತಕ್ಷಣ ಆಡಳಿತ ವ್ಯವಸ್ಥೆ ಲಿಂಗವನ್ನು ಪುನÀರ್ ಪ್ರತಿಷ್ಠಾಪಿಸಬೇಕೋ ಅಥವಾ ವಿಸರ್ಜಿಸಬೇಕೋ ಎನ್ನುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬಂದು ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕ್ಷೇತ್ರದಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸಬಹುದೆಂದು ವಿಶ್ವನಾಥ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್, ಮಡಿಕೇರಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಲ್ಲಚಂಡ ಗೌತಮ್, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಿ.ಎ.ಮಂಜುನಾಥ್ ಹಾಗೂ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ಉಪಸ್ಥಿತರಿದ್ದರು.

error: Content is protected !!