ಕುಂದಚೇರಿಯಲ್ಲಿ ಕಾಂಗ್ರೆಸ್ ಸಭೆ : ಇಂದಿನ ರಾಜಕೀಯ ಭ್ರಷ್ಟಾಚಾರದ ಮುಖವಾಡ ತೊಟ್ಟಿದೆ : ಟಿ.ಪಿ.ರಮೇಶ್ ವಿಷಾದ

12/11/2020

ಮಡಿಕೇರಿ ನ.12 : ರಾಜಕೀಯ ಕ್ಷೇತ್ರ ಸಮಾಜ ಸೇವೆಗಾಗಿ ಮೀಸಲಾಗಬೇಕಾಗಿತ್ತು, ಆದರೆ ಇಂದು ರಾಜಕಾರಣ ಎನ್ನುವುದು ಭ್ರಷ್ಟಾಚಾರದ ಮುಖವಾಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಇದೇ ಕಾರಣದಿಂದ ಜನಪರ ಕೆಲಸ, ಕಾರ್ಯಗಳಿಗೆ ಅಡಚಣೆಯಾಗುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಕ್ತಾರ ಟಿ.ಪಿ.ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಕುಂದಚೇರಿ (ಚೆಟ್ಟಿಮಾನಿ) ಸಭಾ ಭವನದಲ್ಲಿ ನಡೆದ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆದಂಬಾಡಿ ಹರೀಶ್ ಅವರಿಗೆ ಕಾಂಗ್ರೆಸ್ ಧ್ವಜ ನೀಡಿ ರಮೇಶ್ ಮಾತನಾಡಿದರು.
ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸುವ ಕಾರ್ಯಕರ್ತರ ಪಡೆಯನ್ನು ಕಾಂಗ್ರೆಸ್ ಕಟ್ಟಬೇಕೆಂದು ಕರೆ ನೀಡಿದರು.
ರಾಜಕೀಯ ಪಕ್ಷ ಎನ್ನುವುದು ಒಂದು ಕುಟುಂಬವಿದ್ದಂತೆ. ಕುಟುಂಬದ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಅದರಿಂದ ರಾಜಕೀಯದ ಫಲಶೃತಿಯನ್ನು ಕಾಣಲು ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ವಿವಿಧತೆಯಲ್ಲಿ ಏಕತೆಯನ್ನು ಕಟ್ಟಲು ಮುಂದಾಗಿರುವ ಪಕ್ಷ. ರಾಜ್ಯದಲ್ಲಿ ವಿರೋಧ ಪಕ್ಷವಾಗಿ ಸಮರ್ಥ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ಆದ್ದರಿಂದ ಪ್ರತಿಯೊಂದು ಮತಗಟ್ಟೆಯಲ್ಲೂ ಜನರ ಬೇಕು-ಬೇಡಿಕೆಗಳ ಬಗ್ಗೆ ಆಸಕ್ತಿ ವಹಿಸಿ ಕೆಲಸ ಮಾಡುವ ಸದಸ್ಯರನ್ನು ಬೆಳೆಸಬೇಕಾಗಿದೆ ಎಂದರು.
ಮಹಿಳಾ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾದ ಸುರಯ್ಯ ಅಬ್ರಾರ್ ಮಾತನಾಡಿ ಪ್ರತಿ ಮತಗಟ್ಟೆಯಿಂದ ಎರಡು ಮಂದಿಯನ್ನು ಆಯ್ಕೆ ಮಾಡಿಕೊಂಡರೆ ಕನಿಷ್ಠ ಹತ್ತು ಮಂದಿ ಮಹಿಳೆಯರು ಒಂದೊಂದು ವಲಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಈಗಾಗಲೇ ಬ್ಲಾಕಿನ 18 ವಲಯಗಳ ಕಾಂಗ್ರೆಸ್ ನಾಯಕರುಗಳೊಂದಿಗೆ ಚರ್ಚೆ ನಡೆಸಿ, ಪ್ರತಿ ವಲಯದಿಂದ ಮಹಿಳಾ ಪ್ರತಿನಿಧಿಗಳ ಹೆಸರನ್ನು ಸಂಗ್ರಹಿಸಲಾಗುತ್ತಿದೆ. ಸಧ್ಯದಲ್ಲೇ ವಲಯ ಕಾಂಗ್ರೆಸ್ ನಾಯಕರುಗಳೊಂದಿಗೆ ಸಮಾಲೋಚನೆ ನಡೆಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಲಹೆ ಪಡೆದು ಮಹಿಳಾ ಘಟಕಗಳನ್ನು ರಚಿಸಲಾಗುವುದು ಎಂದರು.
ಕುಂದಚೇರಿ ವಿಭಾಗದ ಪಕ್ಷ ಸಂಘಟನೆಯ ಉಸ್ತುವಾರಿ ಹಾಗೂ ವಕೀಲ ಸುನಿಲ್ ಪತ್ರಾವೋ ಮಾತನಾಡಿ, ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಹಿರಿಯ ಕಾಂಗ್ರೆಸ್ಸಿಗರ ಮಾರ್ಗದರ್ಶನದಲ್ಲಿ ನೂತನ ಸಮಿತಿ ಕಾರ್ಯ ನಿರ್ವಹಿಸಬೇಕು. ಯುವಕರಿಗೆ ಪಕ್ಷದ ವಿವಿಧ ಸಮಿತಿಗಳಲ್ಲಿ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾ.ಪಂ ಮಾಜಿ ಸದಸ್ಯ ಹ್ಯಾರೀಸ್ ಎಲ್ಲರೂ ಒಗ್ಗಟ್ಟಿನಿಂದ ಮುಂದಿನ ಚುನಾವಣೆಗಳನ್ನು ಎದುರಿಸಿದರೆ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಕುಂದುಕೊರತೆಗಳನ್ನು ಅವರು ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕಗೊಂಡ ಮುಕ್ಕಾಟಿ ನೇತ್ರಾವತಿ ಅವರಿಗೆ ಅಧಿಕಾರ ಪತ್ರವನ್ನು ನೀಡಲಾಯಿತು. ವಲಯ ಕಾಂಗ್ರೆಸ್‍ನ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೆ.ಎಂ.ಹಂಝ, ವಲಯ ಕಿಸಾನ್ ಘಟಕದ ಅಧ್ಯಕ್ಷರಾಗಿ ಶೆಟ್ಟಿಜನ ಚಿಟ್ಟಿಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಚಯ್ಯ ಅವರನ್ನು ಆಯ್ಕೆ ಮಾಡಲಾಯಿತು. ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಿ.ಎಸ್.ರಶೀದ್, ಹಿಂದುಳಿದ ಘಟಕದ ಅಧ್ಯಕ್ಷರಾಗಿ ಹೆಚ್.ಸುರೇಶ್ ಹಾಗೂ ಪರಿಶಿಷ್ಟ ಘಟಕದ ಅಧ್ಯಕ್ಷರನ್ನಾಗಿ ಶೇಷು ಅವರನ್ನು ನೇಮಿಸಲಾಯಿತು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಕರಿಕೆ ಗ್ರಾ.ಪಂ ಮಾಜಿ ಅಧ್ಯಕ್ಷ, ಭಾಗಮಂಡಲ ವಲಯ ವೀಕ್ಷಕ ಬಾಲಚಂದ್ರ ನಾಯರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೇಕಲ್ ರಮಾನಾಥ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಇಸ್ಮಾಯಿಲ್, ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುದಯ್ ನಾಣಯ್ಯ, ಭಾಗಮಂಡಲ ವಲಯ ಕಾಂಗ್ರೆಸ್ ಅಧ್ಯಕ್ಷ ದೇವಂಗೋಡಿ ಹರ್ಷ, ನಿಕಟಪೂರ್ವ ಅಧ್ಯಕ್ಷ ಡೆಲ್ಲೇಶ್ ಕುಮಾರ್, ಹಿರಿಯ ಕಾಂಗ್ರೆಸ್ಸಿಗರಾದ ಕೆದಂಬಾಡಿ ರಘುನಾಥ್, ಭಾಗಮಂಡಲ ದೇವಾಲಯ ಸಮಿತಿ ಸದಸ್ಯ ಕೆದಂಬಾಡಿ ರಮೇಶ್, ಚೇರಂಬಾಣೆ ವಲಯ ಕಾಂಗ್ರೆಸ್ ಮುಖಂಡ ಕೆ.ಎಂ.ಬಶೀರ್, ಕೆ.ಎಂ.ಇಸ್ಮಾಯಿಲ್ ಹಾಗೂ ಬೂತ್ ಸಮಿತಿಗಳ ನೂತನ ಅಧ್ಯಕ್ಷರು, ಕಾರ್ಯಕರ್ತರು ಹಾಜರಿದ್ದರು. ಬ್ಲಾಕ್‍ನ ಮಾಜಿ ಪ್ರಧಾನ ಕಾರ್ಯದರ್ಶಿ ಹ್ಯಾರಿಸ್ ವಂದಿಸಿದರು.