ಐಗೂರು ಗ್ರಾಮಸಭೆಗೆ ಅಧಿಕಾರಿಗಳು ಗೈರು : ಗ್ರಾಮಸ್ಥರ ಪ್ರತಿಭಟನೆ

November 12, 2020

ಸೋಮವಾರಪೇಟೆ ನ.12 : ಐಗೂರು ಗ್ರಾಮಸಭೆಗೆ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಗೈರು ಹಾಜರಾದ ಕಾರಣ ಅಕ್ರೋಶಗೊಂಡ ಕೃಷಿಕರು ಗ್ರಾಮಸಭೆಯನ್ನು ಬಹಿಷ್ಕರಿಸಿ, ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
ಬೀಡಾಡಿ ದನಗಳ ಹಾವಳಿಯಿಂದ ಕೃಷಿ ಫಸಲು ಹಾನಿಯಾಗುತ್ತಿದ್ದು, ಕೂಡಲೆ ಕ್ರಮಕೈಗೊಳ್ಳಬೇಕೆಂದು ಪಂಚಾಯಿತಿಗೆ ದೂರು ಸಲ್ಲಿಸಿದ್ದರು. ಈ ಕಾರಣದಿಂದ ಅರಣ್ಯ ಇಲಾಖೆ ಹಾಗು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಗೆ ಹಾಜರಾಗಬೇಕೆಂದು ಐಗೂರು ಪಿಡಿಒ ಅವರು ಲಿಖಿತ ಮನವಿ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಗುರುವಾರದ ಗ್ರಾಮಸಭೆಗೆ ಆಗಮಿಸದ ಹಿನ್ನೆಲೆ ಕೃಷಿಕರು ಪ್ರತಿಭಟನೆ ನಡೆಸಿ, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು.
ಈ ವ್ಯಾಪ್ತಿಯಲ್ಲಿ ನೂರಾರು ಜಾನುವಾರುಗಳನ್ನು ಮಾಲಿಕರು ಹೊರಬಿಟ್ಟಿದ್ದು ಬಿಟ್ಟಿದ್ದು, ಕಟ್ಟಿಕೊಳ್ಳುತ್ತಿಲ್ಲ. ಕಾಫಿ ತೋಟ ಹಾಗು ಭತ್ತದ ಗದ್ದೆಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿಂದು, ತುಳಿದು ನಾಶಮಾಡುತ್ತಿವೆ. ಇದರ ಬಗ್ಗೆ ಕಳೆದ ಒಂದು ತಿಂಗಳ ಹಿಂದೆಯೇ ಜಾನುವಾರುಗಳ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಬೇಕು. ಹಿಡಿದು ಗೋ ಶಾಲೆಗೆ ಬಿಡಬೇಕು ಎಂದು ಮನವಿ ಮಾಡಿದ್ದೆವು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕೃಷಿಕರು ಆರೋಪಿಸಿದರು.
ಬೀಡಾಡಿ ದನಗಳ ಬಗ್ಗೆ ರೈತರು ದೂರು ನೀಡಿದ್ದು, ಇದು ಅರಣ್ಯ ಮತ್ತು ಪಶುಸಂಗೋಪನಾ ಇಲಾಖೆಗೆ ಸಂಬಂಧಿಸಿದ್ದಾಗಿದ್ದು ಮಾಹಿತಿ ನೀಡಲಾಗಿದೆ. ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಪಿಡಿಒ ಯಾದವ್ ಹೇಳಿದರು. ಮುಂದಿನ 8 ದಿನಗಳ ಒಳಗೆ ಸಮಸ್ಯೆ ಪರಿಹರಿಸುವುದಾಗಿ ಪಂಚಾಯಿತಿ ಆಡಳಿತಾಧಿಕಾರಿ ಹೇಮಂತ್ ತಿಳಿಸಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟಯಲ್ಲಿ ಕೃಷಿಕರಾದ ಸಂಜಯ್, ಮಚ್ಚಂಡ ಅಶೋಕ್, ಕೆ.ಪಿ. ದಿನೇಶ್, ಲಿಂಗೇರಿ ರಾಜೇಶ್, ಐಯ್ಯಪ್ಪ, ಡಿ.ಕೆ. ಶಿವಪ್ಪ, ಎಂ.ಎಚ್. ತ್ರಿವರ್ಣ, ಡಿ.ಎಸ್. ಚಂಗಪ್ಪ, ಎಂ.ಪಿ. ಮೇಘನ, ಡಿ.ಎಂ. ಪೂವಯ್ಯ, ಅಯ್ಯಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

error: Content is protected !!