ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ : ಕಳಪೆ ಕಾಮಗಾರಿ, ರಸ್ತೆ ವಿಸ್ತರಣೆ ಬಗ್ಗೆ ಚರ್ಚೆ

November 12, 2020

ಸೋಮವಾರಪೇಟೆ ನ.12 : ಪಟ್ಟಣದಲ್ಲಿ ನಡೆದಿರುವ ಕಳಪೆ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಬಾರದು. ಅಯಾ ವಾರ್ಡ್‍ನ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಪರಿಶೀಲಿಸಿ ಬಿಲ್ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆ ಅಧ್ಯಕ್ಷೆ ನಳಿನಿ ಗಣೇಶ್ ಅಧ್ಯಕ್ಷತೆಯಲ್ಲಿ ಗುರುವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಕಳೆದ ಎರಡು ವರ್ಷಗಳಿಂದ ಅನೇಕ ಕಾಮಗಾರಿಗಳು ಕಳಪೆಯಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಸದಸ್ಯ ಪಿ.ಕೆ.ಚಂದ್ರ ಧ್ವನಿಗೂಡಿಸಿದರು.
ಕೆಲ ಇಲಾಖೆಗಳ ಮಾಹಿತಿ ಪಂಚಾಯಿತಿಗೆ ಅವಶ್ಯವಿರುವುದರಿಂದ ಮುಂದಿನ ಸಾಮಾನ್ಯ ಸಭೆಗೆ ಸೆಸ್ಕ್, ಪೊಲೀಸ್, ಲೋಕೋಪಯೋಗಿ ಹಾಗು ಸರ್ವೆ ಇಲಾಖೆಯ ಅಧಿಕಾರಿಗಳನ್ನು ಕರೆಸಬೇಕು ಎಂದು ಸದಸ್ಯ ಎಸ್.ಮಹೇಶ್ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಎಂ.ಜಿ.ರಸ್ತೆ, ಬಸವೇಶ್ವರ ರಸ್ತೆ, ಬಾಣಾವಾರ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದು, ರಸ್ತೆ ಅಗಲೀಕರಣದ ಆತಂಕ ನಿವಾಸಿಗಳಲ್ಲಿ ಇದೆ. ಸೂಕ್ತ ಮಾಹಿತಿಯನ್ನು ಕೊಡಬೇಕಾಗಿದೆ. ಟ್ರಾಫಿಕ್ ಸಮಸ್ಯೆಯನ್ನು ಪೊಲೀಸ್ ಇಲಾಖೆ ಸರಿಪಡಿಸಬೇಕು ಎಂದು ಹೇಳಿದರು.
ಈ ಹಿಂದೆ ನಗರೋತ್ಥನ ಯೋಜನೆಯಲ್ಲಿ 1.70ಕೋಟಿ ರೂ. ಬಂದಿದ್ದು ಟೆಂಡರ್ ಆಗಿದೆ. ಇನ್ನು ಕೆಲ ಕಾಮಗಾರಿಗಳು ನಡೆದಿಲ್ಲ ಎಂದು ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು. ಕೂಡಲೆ ಗುತ್ತಿಗೆದಾರರನ್ನು ಕರೆಸಿ, ಸಮಸ್ಯೆಗಳನ್ನು ಆಲಿಸಿ, ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚನೆ ನೀಡುವಂತ ಮುಖ್ಯಾಧಿಕಾರಿ ನಾಚಪ್ಪ ಅವರಿಗೆ ಸಭೆ ಸೂಚಿಸಿತು.
ವಿವಿಧ ಯೋಜನೆಗಳಿಂದ ಬಂದ ಹಣವನ್ನು ಸದುಪಯೋಗಪಡಿಸಿಕೊಳ್ಳಬೇಕು. ಅನುದಾನ ವಾಪಾಸ್ಸಾಗಲು ಬಿಡಬಾರದು ಎಂದು ಸದಸ್ಯರಾದ ಬಿ.ಆರ್.ಮಹೇಶ್, ಶುಭಾಕರ್ ಹೇಳಿದರು. ಕಾಮಗಾರಿ ಮುಕ್ತಾಯವಾದ ನಂತರ ಗುಣಮಟ್ಟ ಪರಿಶೀಲಸಿ, ಬಿಲ್ ಪಾವತಿ ಮಾಡುವಂತಾಗಬೇಕು ಎಂದು ಉಪಾಧ್ಯಕ್ಷ ಸಂಜೀವ ಸಲಹೆ ನೀಡಿದರು.
ಪ್ರಾರಂಭದಲ್ಲಿ ಎಲ್ಲಾ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ನಿಧನರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸದಸ್ಯೆ ನಾಗರತ್ನ ಹೊರತುಪಡಿಸಿ, ಎಲ್ಲಾ ಸದಸ್ಯರು ಇದ್ದರು.

error: Content is protected !!