ಮಲ್ಲಳ್ಳಿ, ಪುಷ್ಪಗಿರಿಬೆಟ್ಟ, ಕೋಟೆಬೆಟ್ಟದಲ್ಲಿ ಕೋವಿಡ್ ನಿಯಮ ಪಾಲನೆಯಾಗುತ್ತಿಲ್ಲ : ಗ್ರಾ.ಪಂ ಅಧಿಕಾರಿಗಳ ಸಭೆಯಲ್ಲಿ ಅಸಮಾಧಾನ

12/11/2020

ಸೋಮವಾರಪೇಟೆ ನ.12 : ತಾಲೂಕಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಕೋವಿಡ್-19ನ್ನು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡುವುದು ಆಯಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿ ಜವಾಬ್ದಾರಿಯಾಗಿದೆ, ತಪ್ಪಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಯಿತು.
ಇತ್ತೀಚಿನ ದಿನಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕ್ಷೀಣಿಸುತ್ತಿದೆಯಾದರೂ, ರೋಗದ ಬಗ್ಗೆ ಮುನ್ನೆಚ್ಚರಿಕೆ ಅಗತ್ಯವಾಗಿದೆ. ಇತ್ತೀಚೆಗೆ ಮಲ್ಲಳ್ಳಿ, ಪುಷ್ಪಗಿರಿಬೆಟ್ಟ, ಕೋಟೆಬೆಟ್ಟ ಸೇರಿದಂತೆ ತಾಲೂಕಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸಿಗರು ಕೊರೋನಾ ನಿಯಮಗಳಲ್ಲು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ ಎಂಬ ದೂರುಗಳು ಬರುತ್ತಿದೆ. ಆದರೆ ಈ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ವಾಹನ ನಿಲುಗಡೆ ಶುಲ್ಕ, ಪ್ರವೇಶ ಶುಲ್ಕಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳು ವಸೂಲಿ ಮಾಡುತ್ತಿದ್ದು, ಅದರಂತೆ ಉಷ್ಣಾಂಶ ತಪಾಸಣೆ, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸೂಚನೆ ಪಾಲಿಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಎಚ್ಚರಿಕಾ ಕ್ರಮ ಕೈಗೊಳ್ಳದೆ ಇದ್ದು, ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚಾದ್ದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ ಎಂದರು.
ಸಭೆಗೆ ತಹಸೀಲ್ದಾರ್ ಗೋವಿಂದರಾಜ್ ಅವರು, ತಾಲೂಕು ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕಸ ವಿಲೇವಾರಿಗಾಗಿ, ಸ್ಮಶಾನಕ್ಕಾಗಿ ಹಾಗೂ ಬಡವರಿಗೆ ನಿವೇಶನ ನೀಡುವ ಉದ್ಧೇಶದಿಂದ ಅಲ್ಲಲ್ಲಿ ಸರಕಾರಿ ಜಾಗಗಳನ್ನು ಮೀಸಲಿಟ್ಟು, ಅದನ್ನು ಅಭಿವೃದ್ಧಿ ಪಡಿಸಲು ಇಲಾಖೆ ಕ್ರಮ ಕೈಗೊಂಡಿದೆ. ಇದರ ಪ್ರಗತಿ ಕಾರ್ಯಗಳನ್ನು ಸರಕಾರದ ಮುಖ್ಯ ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಸಂಗ್ರಹಿಸುತ್ತಿರುವ್ಯದರಿಂದ, ಈ ಯೋಜನೆಗಳ ಕಾರ್ಯ ಶೀಘ್ರಗತಿಯಲ್ಲಿ ಸಾಗುತ್ತಿದೆ. ಆದರೆ ಈ ಮೀಸಲಿಟ್ಟ ಜಾಗವನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಲ್ಲಿ ಮುಲಾಜಿಲ್ಲದೆ ತೆರವು ಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಈಗಾಗಲೇ ಪೌತಿ ಖಾತೆ ಆಂದೋಲನ ತಾಲೂಕಿನಾಧ್ಯಂತ ಚಾಲನೆಯಲ್ಲಿದ್ದು, ಈ ಬಗ್ಗೆ ಕೂಡ ಗ್ರಾಮಾಭಿವೃದ್ಧಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ. ಈಗಾಗಲೇ ದಾಖಲೆ ಸಹಿತವಾದ 72 ಅರ್ಜಿಗಳು ಬಂದಿದೆ. ಜಮ್ಮಾ ಬಾಣೆ ಸೇರಿದಂತೆ ಕೆಲವೊಂದು ನಿಬಂಧನೆಗಳ ಭೂಮಿಯ ಬಗ್ಗೆ ಜನರಲ್ಲಿ ಅನುಮಾನವಿದೆ. ಪ್ರತಿಯೊಂದು ಪೌತಿ ಖಾತೆಗೂ ಪೌತಿದಾರರ ಮರಣ ದೃಢೀಕರಣ ಪತ್ರ ಅತ್ಯವಶ್ಯಕವಾಗಿದ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಅಭಿಮನ್ಯುಕುಮಾರ್ ಅವರು, ಮರಣ ಸಮರ್ಥನಾ ಪತ್ರ ಮಾತ್ರ ನೀಡಿದ್ದಲ್ಲಿ ಖಾತೆ ಬದಲಾಗುವುದಿಲ್ಲ. ತಾಲೂಕು ತಹಸೀಲ್ದಾರರಿಂದ ದೃಢೀಕರಿಸಿದ ಮರಣ ದೃಢೀಕರಣ ಪತ್ರ, ಅದು ಲಭ್ಯವಿಲ್ಲದ್ದಿದ್ದಲ್ಲಿ ನ್ಯಾಯಾಲಯದ ಮೂಲಕ ಮರಣ ದೃಢೀಕರಣ ಪತ್ರವನ್ನು ಪಡೆದು ಪೌತಿ ಖಾತೆ ಅರ್ಜಿಯೊಂದಿಗೆ ಲಗತ್ತಿಸಬೇಕಾಗಿದೆ ಎಂದರು.
ಇನ್ನುಳಿದಂತೆ 94 ಸಿ ಚಾಲನೆಯಲ್ಲಿದೆ. ಅಕ್ರಮ-ಸಕ್ರಮ ಸಮಿತಿಯ ಮೂಲಕ ಹಕ್ಕುಪತ್ರಗಳನ್ನು ವಿತರಣೆ ಮಾಡಲು ತಯಾರು ನಡೆಯುತ್ತಿದೆ ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಾಸ ದೃಢೀಕರಣ ಪತ್ರ ನೀಡುವ ಬಗ್ಗೆ ಕೆಲವು ಗ್ರಾಮಾಭಿವೃದ್ಧಿ ಅಧಿಕಾರಿಗಳು ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದು, ಈ ಕಾರ್ಯವನ್ನು ಕಂದಾಯ ಇಲಾಖೆಯ ಸಕಾಲಕ್ಕೆ ವರ್ಗಾವಣೆಯಾಗಿರುವುದರಿಂದ ಪಂಚಾಯಿತಿಯಿಂದ ನೀಡಲು ಸಾಧ್ಯವಿಲ್ಲ ಎಂದರು.
ಇದಕ್ಕೆ ಪ್ರತಿಕ್ರಯಿಸಿದ ತಹಸೀಲ್ದಾರ್ ಮನೆಗಳಿಂದ ಕಂದಾಯ, ನೀರಿನ ಕಂದಾಯ ವಸೂಲಿಯನ್ನು ಮಾಡುವ ನೀವು ವಾಸ ಸಮರ್ಥನಾ ಪತ್ರ ನೀಡಲೇ ಬೇಕು. ಅದರ ಮೂಲಕ ಗ್ರಾಮ ಲೆಕ್ಕಿಗರು ವಾಸ ದೃಢೀಕರಣ ಪತ್ರ ನೀಡಲು ಸಾಧ್ಯವಾಗುತ್ತದೆ. ಅದನ್ನು ಬಿಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳಬೇಡಿ ಎಂದರು.
ವೇದಿಕೆಯಲ್ಲಿ ತಾ.ಪಂ. ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಚಂಗಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಜಯಣ್ಣ ಇದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರುಗಳು, ತಾಲೂಕಿನ ಎಲ್ಲಾ ಗ್ರಾ.ಪಂ.ಗಳ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಅಭಿಯಂತರರು ಪಾಲ್ಗೊಂಡಿದ್ದರು.