ಸಹಕಾರ ಸಪ್ತಾಹಕ್ಕೆ ನ.14 ರಂದು ಚಾಲನೆ : ಎಂ.ಎ.ರಮೇಶ್‍ಗೆ ಸಹಕಾರ ರತ್ನ ಪ್ರಶಸ್ತಿ

13/11/2020

ಮಡಿಕೇರಿ ನ.13 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನ.14 ರಿಂದ 20ರ ವರೆಗೆ “ಕೊರೋನಾ ಸೋಂಕು- ಆತ್ಮನಿರ್ಭರ ಭಾರತ- ಸಹಕಾರ ಸಂಸ್ಥೆಗಳು” ಎಂಬ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳು ಮತ್ತು ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ, ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಕುರಾದ ಗೌಡ್ನಮನೆ ಪಿ.ದೊಡ್ಡಯ್ಯ ನೇತೃತ್ವದಲ್ಲಿ ಕೊಡಗು ಜಿಲ್ಲೆಯ ಪ್ರಥಮ ಸಹಕಾರ ಸಂಘ ಸ್ಥಾಪಿಸಲ್ಪಟ್ಟಿತು. ನಂತರ ಜಿಲ್ಲೆಯ ವಿವಿಧೆಡೆ ಸಹಕಾರ ಸಂಘಗಳು ಸ್ಥಾಪನೆಗೊಂಡವು. ಪ್ರತಿವರ್ಷ ಸಹಕಾರ ಸಪ್ತಾಹದ ಅಂಗವಾಗಿ ಅರ್ಥಗರ್ಭಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕಾರಿ ಕ್ಷೇತ್ರವನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ನ.14 ರಂದು ಮದಲಾಪುರ ಹಾಲು ಉತ್ಪಾದಕ ಸಹಕಾರ ಸಂಘದ ನೇತೃತ್ವದಲ್ಲಿ “ಕೊರೋನೋತ್ತರ ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ” ದಿನಾಚರಣೆಯನ್ನು ಆಚರಿಸಲಾಗುವುದು.
ಅಂದು ಬೆಳಗ್ಗೆ 10.30ಕ್ಕೆ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ಯಾಕ್ಸ್‍ನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಅಧ್ಯಕ್ಷತೆಯನ್ನು ಮದಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾಜಾರಾವ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ತಾನು ಉದ್ಘಾಟಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನದ ಹಾಲು ಒಕ್ಕೂಟದ ನಿರ್ದೇಶಕರು ಹಾಗೂ ಕೂಡಿಗೆ ಆರ್.ಕೆ.ಪ್ಯಾಕ್ಸ್‍ನ ಅಧ್ಯಕ್ಷರು ಉತ್ತಮ ಕಾರ್ಯನಿರ್ವಹಣಾ ಸಹಕಾರ ಸಂಘಟಗಳಿಗೆ ಸನ್ಮಾನ ಮಾಡಲಿದ್ದಾರೆ.
ನ.15 ರಂದು ಕೊಡಗು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ “ಸಹಕಾರಿ ಮಾರಾಟ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ” ದಿನಾಚರಣೆ ನಡೆಯಲಿದೆ.
ವಿರಾಜಪೇಟೆಯ ಕೊಡಗು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತ ಬಲ್ಲಡಿಚಂಡ ನಾಣಯ್ಯ ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹಿರಿಯ ಸಹಕಾರಿಗಳಾದ ಐ.ಎಂ. ಕಾವೇರಮ್ಮ, ಸೋಮೆಯಂಡ ಕಮಲ, ಬೊವ್ವೇರಿಯಂಡ ಆಶಾ ಸುಬ್ಬಯ್ಯ, ಬಿ.ಆರ್.ಸುಧಾ ಅವರನ್ನು ಸನ್ಮಾನಿಸಲಿದ್ದಾರೆ.
ನ.16 ರಂದು ಕುಂಜಿಲ ವಿವಿಧೋದ್ದೇಶ ಸಹಕಾರ ದವಸ ಭಂಡಾರ ಹಾಗೂ ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ‘ಅಂತರ್ಜಾಲ ಸಂಪರ್ಕದ ಮೂಲಕ ಸಹಕಾರ ಶಿಕ್ಷಣ-ತರಬೇತಿಯ ಪುನರ್ ಮನನ’ ದಿನಾಚರಣೆ ಬೆಳಗ್ಗೆ 10.30ಕ್ಕೆ ಕಕ್ಕಬ್ಬೆಯ ಮುತ್ತವ್ವ ಹಾಲ್‍ನಲ್ಲಿ ನಡೆಯಲಿದ್ದು, ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಉದ್ಘಾಟಿಸಲಿದ್ದಾರೆ.
ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾ ಸಂಘ ಅಧ್ಯಕ್ಷ ಕಲ್ಯಾಟಂಡ ಎ.ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ನಾಟೋಳಂಡ ಪಿ.ಚರ್ಮಣ, ಮೇಚಂಡ ಎಂ. ಅಚ್ಚಯ್ಯ, ಕಲಿಯಂಡ ಡಿ. ಅಪ್ಪಣ್ಣ, ನಂಬಡಮಂಡ ಪಿ.ಸೋಮಣ್ಣ, ಕಲ್ಯಾಟಂಡ ಎ. ತಮ್ಮಯ್ಯ ಅವರನ್ನು ಸನ್ಮಾನಿಸಲಾಗುವುದು.
ನ. 17 ರಂದು ವಿರಾಜಪೇಟೆ ತಾಲ್ಲೂಕು ಸಹಕಾರ ಕೂಟ, ಬೇಟೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಬೇಟೋಳಿ ವಿವಿದೊದ್ಧೇಶ ಸಹಕಾರ ದವಸ ಭಂಡಾರದ ಸಂಯುಕ್ತಶ್ರಯದಲ್ಲಿ ಬೇಟೋಳಿ ಪ್ಯಾಕ್ಸ್‍ನ ಸಭಾಂಗಣದಲ್ಲಿ ‘ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ದಿನಾಚರಣೆ ನಡೆಯಲಿದೆ.
ಅಂದು ಬೆಳಿಗ್ಗೆ 10.30ಕ್ಕೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಪಟ್ಟಡ ಮನು ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಾದ ಬಿ.ಜಿ. ಪುರುಷೋತ್ತಮ್, ಪಟ್ಟಡ ಕೆ. ಪೂವಣ್ಣ, ಅಚ್ಚಪಂಡ ಕೆ. ಮಾಯವ್ವ ಅವರನ್ನು ಕೊಡಗು ಜಿಲ್ಲಾ ಸಹಕಾರಿ ಕೇಂದ್ರದ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಸನ್ಮಾನಿಸಲಿದ್ದಾರೆ.
ನ. 18 ರಂದು ಪೆರಾಜೆಯ ಶ್ರೀ ಅನ್ನಪೂರ್ಣಶ್ವರಿ ಕಲಾ ಮಂದಿರದಲ್ಲಿ ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಶ್ರದಲ್ಲಿ ‘ವ್ಯವಹಾರ, ಉದ್ಯೋಗ ಕಳೆದುಕೊಂಡವರು, ಬಾಧಿತರು, ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ ದಿನಾಚರಣೆ ನಡೆಯಲಿದ್ದು, ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಉದ್ಘಾಟಿಸಲಿದ್ದಾರೆ.
ದಿನದ ಮಹತ್ವದ ಕುರಿತು ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ಕೆ. ವೀರಪ್ಪ ಗೌಡ ಮಾತನಾಡಲಿದ್ದಾರೆ.
ನ.19 ರಂದು ಶಿರಂಗಾಲ ದೇವತಾ ಸಮಿತಿ ಕಾರ್ಯಾಲಯದಲ್ಲಿ ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಯುವಜನ, ಮಹಿಳಾ ಮತ್ತು ಅಬಲವರ್ಗದವರಿಗಾಗಿ ಸಹಕಾರಿ ಸಂಸ್ಥೆಗಳು ದಿನಾಚರಣೆ ನಡೆಯಲಿದ್ದು, ಕಾರ್ಯಕ್ರಮವನ್ನು ತಾನು ಉದ್ಘಾಟಿಸುವುದಾಗಿ ತಿಳಿಸಿದರು.
ಶಿರಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಯಾದ ಎಸ್.ವಿ. ನಂಜುಂಡಪ್ಪ, ಎಸ್.ಪಿ. ರಾಜು, ಎನ್.ಬಿ. ಪಾರ್ಥ, ಬಿ.ಎಸ್. ಬಸವಣ್ಣಯ್ಯ, ಪಿ.ಸಿ.ಬೇಲಯ್ಯ ಅವರನ್ನು ಸನ್ಮಾನಿಸಲಾಗುವುದು.
ಕೊನೆಯ ದಿನವಾದ ನ.20 ರಂದು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಹಯೋಗದಲ್ಲಿ “ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ, ಡಿಜಿಟಲೈಜೇಷನ್ ಮತ್ತು ಸಾಮಾಜಿಕ ಜಾಲತಾಣ ದಿನಾಚರಣೆ ಹಾಗೂ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿದೊದ್ಧೇಶ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಿಗೆ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೆ.ಪಿ. ಗಣಪತಿ ಗೌರವ ಪ್ರದಾನ ಮಾಡಲಿದ್ದಾರೆ.
::: ಎಂ.ಎ.ರಮೇಶ್‍ಗೆ ಸಹಕಾರ ರತ್ನ ಪ್ರಶಸ್ತಿ :::
ಸಪ್ತಾಹದ ಅಂಗವಾಗಿ ಸಹಕಾರ ಕ್ಷೇತ್ರದ ವಿವಿಧ ವಲಯಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ವಿರಾಜಪೇಟೆ ತಾಲೂಕಿನ ಮಾತಂಡ ಎ.ರಮೇಶ್ ಅವರನ್ನು ಕೊಡಗು ಸಹಕಾರ ರತ್ನ ಪ್ರಶಸಿಗೆ ಆಯ್ಕೆ ಮಾಡಲಾಗಿದೆ.
ಶ್ರೇಷ್ಠ ಸಹಕಾರಿಗಳು ಪ್ರಶಸ್ತಿಗೆ ಮಡಿಕೇರಿಯ ಮಕ್ಕಂದೂರು ಗ್ರಾಮದ ಕುಂಬುಗೌಡನ ಉತ್ತಪ್ಪ, ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಮಚ್ಚಮಾಡ ಕಂದಾ ಬೀಮಯ್ಯ, ಸೋಮವಾರಪೇಟೆ ತಾಲೂಕಿನ ಹೇರೂರು ಗ್ರಾಮದ ಎಸ್.ಪಿ.ನಿಂಗಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಶ್ರೇಷ್ಠ ಮಹಿಳಾ ಸಹಕಾರಿಯಾಗಿ ಚೊಟ್ಟೆಯಂಡಮಾಡ ಬೇಬಿ ಪೂವಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮನುಮುತ್ತಪ್ಪ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಮನುರಾಮಚಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ನಿರ್ದೇಶಕರಾದ ರವಿಬಸಪ್ಪ ಹಾಗೂ ಕೋಡಿರ ಎಂ.ತಮ್ಮಯ್ಯ ಉಪಸ್ಥಿತರಿದ್ದರು.