ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ವಿರುದ್ಧ ಕ್ರಮಕ್ಕೆ ಟ್ಯಾಕ್ಸಿ ಚಾಲಕರ ಒತ್ತಾಯ

13/11/2020

ಮಡಿಕೇರಿ ನ.13 : ಜಿಲ್ಲೆಯ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಪ್ರವಾಸಿ ವಾಹನ ನಿಲ್ದಾಣಗಳಲ್ಲಿ ವೈಟ್ ಬೋರ್ಡ್ ಹೊಂದಿರುವ ಖಾಸಗಿ ಲಘು ವಾಹನಗಳನ್ನು ನಿಲ್ಲಿಸಿ ನಿಯಮ ಬಾಹಿರವಾಗಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಪ್ರಾಮಾಣಿಕವಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಿರುವ ಹಳದಿ ಬೋರ್ಡ್‍ನ ಪ್ರವಾಸಿ ವಾಹನ ಮಾಲೀಕರು ಹಾಗೂ ಚಾಲಕರಿಗೆ ಇದರಿಂದ ನಷ್ಟವಾಗುತ್ತಿದೆ ಎಂದು ಆರೋಪಿಸಿರುವ ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್‍ನ ಜಿಲ್ಲಾ ಘಟಕ, ಪ್ರಾದೇಶಿಕ ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಡಿವೈಎಸ್‍ಪಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದ ಅಸೋಶಿಯೇಷನ್‍ನ ಪ್ರಮುಖರು, ಪೆÇಲೀಸ್ ಇಲಾಖೆ ಹಾಗೂ ಆರ್‍ಟಿಓ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು, ಕಾನೂನು ಬಾಹಿರ ಟ್ಯಾಕ್ಸಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಿಗಧಿತ ತೆರಿಗೆ ಪಾವತಿಸಿ ವಾಣಿಜ್ಯ ಉದ್ದೇಶಗಳಿಗಾಗಿ ನಿಲ್ದಾಣಗಳಲ್ಲಿ ಕಾಯುವ ಪ್ರವಾಸಿ ವಾಹನಗಳಿಗೆ ಬಾಡಿಗೆ ಇಲ್ಲದೆಯೇ ನಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ತೆರಿಗೆಯನ್ನು ವಂಚಿಸುತ್ತಿರುವ ವೈಟ್‍ಬೋರ್ಡ್ ಟ್ಯಾಕ್ಸಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಪ್ರವಾಸಿ ವಾಹನಗಳನ್ನು ಚಲಾಯಿಸುತ್ತಿರುವ ವಿದ್ಯಾವಂತ ಯುವಕರು ಇನ್ನಿತರ ಪ್ರವಾಸಿ ಚಾಲಕರುಗಳು, ಮಾಲೀಕರು, ಅವರನ್ನು ಅವಲಂಬಿಸಿರುವ ಕುಟುಂಬ ವರ್ಗದವರು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಮಾಸಿಕ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಾಮಾಣಿಕರಿಗೆ ನ್ಯಾಯ ಒದಗಿಸಲು ಮತ್ತು ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಡೆಗಟ್ಟಲು ಪೊಲೀಸ್ ಹಾಗೂ ಆರ್‍ಟಿಒ ಇಲಾಖೆ ವಿಶೇಷ ತಂಡವನ್ನು ರಚಿಸಿ ನಿಯಮ ಬಾಹಿರ ವಾಹನಗಳನ್ನು ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಸಂಘದ ಪ್ರಮುಖರಾದ ಎಂ.ಎ.ರಫೀಕ್, ರಕೀಬ್ ಪಿ.ಎ. ತಿರುಪತಿ ಮತ್ತಿತರರು ಹಾಜರಿದ್ದರು.