ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರ ತರುವುದು ಕಡ್ಡಾಯ : ನ.17 ರಿಂದ ಕಾಲೇಜ್ ಆರಂಭ : ಜಿಲ್ಲಾಧಿಕಾರಿಗಳು ನೀಡಿರುವ ಮಾರ್ಗಸೂಚಿ ಹೀಗಿದೆ ***

13/11/2020

ಮಡಿಕೇರಿ ನ.13 : ಸ್ನಾತಕೋತ್ತರ ಹಾಗೂ ಪದವಿಯ ಅಂತಿಮ ವರ್ಷದ ತರಗತಿಗಳು ಇದೇ ನವೆಂಬರ್ 17 ರಿಂದ ಆರಂಭವಾಗಲಿದ್ದು, ಆ ನಿಟ್ಟಿನಲ್ಲಿ ಈ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಆರ್‍ಟಿಪಿಸಿಆರ್ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಕೊಂಡು ಕಾಲೇಜಿಗೆ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಡಳಿತ ಭವನದ ವಿಡಿಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ತರಗತಿ ಆರಂಭ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆಯ ಕಾಲೇಜುಗಳ ಪ್ರಾಂಶುಪಾಲರ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಸ್ನಾತಕೋತ್ತರ ಮತ್ತು ಪದವಿ ಹಂತದ ಅಂತಿಮ ವರ್ಷದ ತರಗತಿಯನ್ನು ಆರಂಭಿಸಲು ನಿರ್ದೇಶನ ನೀಡಿದ್ದು, ಅದರಂತೆ ಕ್ರಮ ವಹಿಸಬೇಕಿದೆ. ಆ ದಿಸೆಯಲ್ಲಿ ಪ್ರಾಂಶುಪಾಲರು, ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಕಾಲೇಜಿಗೆ ಆಗಮಿಸುವ 3 ದಿನದೊಳಗಿನ ಆರ್‍ಟಿಪಿಸಿಆರ್ ಕೋವಿಡ್ ಪರೀಕ್ಷೆಯ ಪ್ರಮಾಣ ಪತ್ರ ತರಬೇಕು ಎಂದರು.
ಜಿಲ್ಲೆಯ ವಿದ್ಯಾರ್ಥಿಗಳು ಹತ್ತಿರದ ಪ್ರಾಥಮಿಕ ಮತ್ತು ಸಮುದಾಯ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಬಹುದಾಗಿದೆ. ಹೊರ ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲಿನ ಹತ್ತಿರದ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ ತರಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ಜಿಲ್ಲೆಯ ಅಗತ್ಯವಿರುವ ಕಡೆ ಕೋವಿಡ್ ಪರೀಕ್ಷೆ ನಡೆಸಲು ಸಂಚಾರಿ ತಂಡವನ್ನು ಕಳಿಸಿಕೊಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸಲಹೆ ಮಾಡಿದರು.
ಯಾವುದೇ ಗೊಂದಲಗಳಿಗೆ ಅವಕಾಶ ನೀಡಬಾರದು, ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತ ಅಥವಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರಿಗೆ ತಕ್ಷಣವೇ ಮಾಹಿತಿ ನೀಡಬೇಕು. ಕಾಲೇಜುಗಳಲ್ಲಿ ಸ್ವಚ್ಚತೆ ಕಾಪಾಡಬೇಕು, ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ನವೆಂಬರ್ 21 ರೊಳಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳಿಗೆ ಆರ್‍ಟಿಪಿಸಿಆರ್ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಲಸಿಕಾಧಿಕಾರಿ ಡಾ.ಗೋಪಿನಾಥ್, ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ.ಎಸ್.ವಿ ಅಪ್ಪಾಜಿ ಗೌಡ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಭಾರತಿ, ನೋಡಲ್ ಅಧಿಕಾರಿ ಕೆ.ಸಿ.ದಯಾನಂದ, ಕೆಎಸ್‍ಆರ್‍ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕರಾದ ಗೀತಾ, ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಕಾಲೇಜುಗಳ ಪ್ರಾಂಶುಪಾಲರು ಇತರರು ಇದ್ದರು.

ಸರ್ಕಾರದ ನಿರ್ದೇಶನದಂತೆ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಗತಿಗಳನ್ನು ದಿನಾಂಕ 17.11.2020ರಿಂದ ಪ್ರಾರಂಭಿಸುವ ಬಗ್ಗೆ ದಿನಾಂಕ 13.11.2020ರಂದು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ನಡೆಸಲಾಯಿತು.  
ಸರ್ಕಾರದ ಆದೇಶದಂತೆ ಕಾಲೇಜು / ಹಾಸ್ಟೆಲ್ ಗೆ ವಿದ್ಯಾರ್ಥಿಗಳು , ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಾಗುವ ಮುಂಚಿತವಾಗಿ ಕೋವಿಡ್ -19 ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗಿದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಸಾರಾಂಶ ಈ ಕೆಳಕಂಡಂತಿದೆ. 
1. ಕೊಡಗು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೊರ ಜಿಲ್ಲೆಯ ವಿದ್ಯಾರ್ಥಿಗಳು ಕಾಲೇಜು / ಹಾಸ್ಟೆಲ್ ಗೆ ಆಗಮಿಸುವ ಮುಂಚಿತವಾಗಿ ಕಡ್ಡಾಯವಾಗಿ ಅವರ ಜಿಲ್ಲೆಯಲ್ಲಿ ಕೋವಿಡ್ -19 ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ಬರುವುದು. 
2. ಜಿಲ್ಲೆಯ ವಿದ್ಯಾರ್ಥಿಗಳು ಹೊರ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ, ಅವರುಗಳು ಈ ಜಿಲ್ಲೆಯಿಂದ ಹೋಗುವ ಮುಂಚಿತವಾಗಿ  ಕಡ್ಡಾಯವಾಗಿ ಕೋವಿಡ್ -19 ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಮಾಡಿಸಿಕೊಂಡು ನೆಗೆಟಿವ್ ವರದಿಯೊಂದಿಗೆ ತೆರಳುವುದು.

3. ಈ ಜಿಲ್ಲೆಯ ವಿದ್ಯಾರ್ಥಿಗಳು ಇದೇ ಜಿಲ್ಲೆಯ ಹಾಸ್ಟೆಲ್ / ಕಾಲೇಜಿಗೆ ಆಗಮಿಸುವುದಿದ್ದಲ್ಲಿ ಸಹ ಕೋವಿಡ್ -19 ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಮಾಡಿಸಿಕೊಂಡು ನೆಗೆಟೆವ್ ವರದಿಯೊಂದಿಗೆ ಬರುವುದು. 

4. ಆರೋಗ್ಯ ಕೇಂದ್ರ ಸನಿಹದಲ್ಲಿ ಲಭ್ಯವಿರದಿದ್ದಲ್ಲಿ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದ್ದಲ್ಲಿ ಮೊಬೈಲ್ ಪರೀಕ್ಷಾ ತಂಡವನ್ನು ಆರೋಗ್ಯ ಇಲಾಖೆಯಿಂದ ನಿಯೋಜಿಸುವುದು. 

5. ಮೇಲಿನಂತೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಸಮನ್ವಯತೆಯಿಂದ ಅಗತ್ಯ ಕ್ರಮ ಕೈಗೊಳ್ಳುವುದು.
6. ಈ ಜಿಲ್ಲೆಯ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ನಾಳೆಯಿಂದ ದಿನಾಂಕ 21.11.2020ರ ಕೋವಿಡ್ -19 ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು . 
7. ಆರ್.ಟಿ.ಪಿ.ಸಿ.ಆರ್.  ಪರೀಕ್ಷೆಯ ಸಮಯದಲ್ಲಿ ಮತ್ತು ಕಾಲೇಜು / ಹಾಸ್ಟೆಲ್ ಗೆ ಆಗಮಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಕಾಲೇಜು ವತಿಯಿಂದ ನೀಡಲಾದ ಗುರುತಿನ ಚೀಟಿಯೊಂದಿಗೆ ಹಾಜರಾಗುವುದು. 
8. ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ ಮತ್ತು ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಸೌಲಭ್ಯ ಇರುತ್ತದೆ.
9. ಮುಂದಿನ ಮೂರು ದಿನಗಳಲ್ಲಿಯೂ ಸಹ ಕೋವಿಡ್ ಕರ್ತವ್ಯ ನಿರತ ಜಿಲ್ಲೆಯ ವೈದ್ಯಾಧಿಕಾರಿಗಳು ಮತ್ತು ಕೋವಿಡ್ ಪರಿಕ್ಷಾಲಯದ ಸಿಬ್ಬಂದಿಗಳು ಎಂದಿನಂತೆ ಕರ್ತವ್ಯ ನಿರ್ವಹಿಸಲು ನಿರ್ದೇಶನ ನೀಡಲಾಗಿದೆ. 
10. ಸರ್ಕಾರದ ಕೋವಿಡ್ – 19 ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಜಿಲ್ಲೆಯ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.

11. ದಿನಾಂಕ 17.12.2020 ರಿಂದ ತರಗತಿಗಳನ್ನು ಪ್ರಾರಂಬಭಿಸಬೇಕು ಎಂದಿದ್ದರೂ ಸಹ ಅನುಕೂಲತೆಯ ದೃಷ್ಟಿಯಿಂದ ಮೇಲಿನಂತೆ ಸಮಯ ವಿಸ್ತರಣೆ ಮಾಡಲಾಗಿದ್ದು, ಯಾರೂ ಅತಂಕಕ್ಕೆ ಒಳಗಾಗದೆ ನಿಗಧಿತ ದಿನಾಂಕದ ಒಳಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು. 

ಜಿಲ್ಲಾಧಿಕಾರಿ,ಕೊಡಗು ಜಿಲ್ಲೆ, ಮಡಿಕೇರಿ