ಬಿಜೆಪಿಯಿಂದ ಅಧಿಕಾರ ದುರುಪಯೋಗ : ವಿರಾಜಪೇಟೆ ಕಾಂಗ್ರೆಸ್ ಉಸ್ತುವಾರಿ ಟಿ.ಎಂ.ಶಾಹಿದ್ ಆರೋಪ

14/11/2020

ಮಡಿಕೇರಿ ನ.14 : ಇತ್ತೀಚೆಗೆ ನಡೆದ ಆರ್‍ಆರ್ ನಗರ ಮತ್ತು ಶಿರಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದು, ಇವಿಎಂ ಯಂತ್ರವನ್ನು ಹ್ಯಾಕ್ ಮಾಡಿರುವ ಬಗ್ಗೆ ಸಂಶಯವಿದೆ ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಟಿ.ಎಂ.ಶಾಹಿದ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಗೆ ಮತ ಬೀಳಲು ಸಾಧ್ಯವೇ ಇಲ್ಲದ ಬೂತ್‍ಗಳಲ್ಲಿ ಕೂಡ ಅಧಿಕ ಮತಗಳನ್ನು ಆ ಪಕ್ಷ ಪಡೆದುಕೊಂಡಿದ್ದು, ಮತದಾರರನ್ನು ಬೆದರಿಸುವ ತಂತ್ರಗಾರಿಕೆಯೂ ನಡೆದಿದೆ. ಎರಡೂ ಕ್ಷೇತ್ರಗಳಲ್ಲಿನ ಗೆಲುವು ಅಕ್ರಮ ಮಾರ್ಗದಿಂದ ಆಗಿದ್ದು, ದಲಿತರು ಹಾಗೂ ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಮತಚೀಟಿಯಲ್ಲಿ ಇಲ್ಲದಂತೆ ಮಾಡಲಾಗಿದೆ. ಭ್ರಷ್ಟಾಚಾರದಿಂದ ಗಳಿಸಿದ ಹಣವನ್ನು ಉಪಚುನಾವಣೆಯಲ್ಲಿ ಖರ್ಚು ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿದೆ ಎಂದು ಆರೋಪಿಸಿದರು.
ಬಿಜೆಪಿಯ ಯಾವುದೇ ತಂತ್ರಗಾರಿಕೆಗೆ ಕಾಂಗ್ರೆಸ್ ಧೃತಿಗೆಡುವುದಿಲ್ಲ, ಬದಲಿಗೆ ಜನಜಾಗೃತಿ ಮೂಡಿಸಿ ಗೆಲುವಿಗಾಗಿ ಸಂವಿಧಾನ ಬದ್ಧವಾಗಿ ಹೋರಾಟವನ್ನು ನಡೆಸಲಿದೆ ಎಂದು ಶಾಹಿದ್ ಹೇಳಿದರು. ಮುಂಬರುವ ಚುನಾವಣೆಗಳಲ್ಲಿ ಅಕ್ರಮವನ್ನು ಎಸಗದೆ ನೇರವಾಗಿ ಸ್ಪರ್ಧೆಗಿಳಿದು ಗೆದ್ದು ತೋರಿಸಲಿ ಎಂದು ಬಿಜೆಪಿಗೆ ಸವಾಲು ಹಾಕಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಕುಶಾಲನಗರ ಪ.ಪಂ ಚುನಾವಣೆ ಸಂದರ್ಭ ಬಿಜೆಪಿಯೊಂದಿಗೆ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್ ಸದಸ್ಯರ ಕ್ರಮವನ್ನು ಆ ಪಕ್ಷದ ಜಿಲ್ಲಾಧ್ಯಕ್ಷರು ಸಮರ್ಥಿಸಿಕೊಳ್ಳುವುದು ಖಂಡನೀಯವೆಂದರು.
ಅಂಗೈಯಲ್ಲಿರುವ ಉಣ್ಣಿಗೆ ಕನ್ನಡಿ ಬೇಕೆ ಎಂದು ಪ್ರಶ್ನಿಸಿದ ಅವರು ಪ.ಪಂ ಚುನಾವಣೆಗಾಗಿ ಜಿಲ್ಲಾ ಕಾಂಗ್ರೆಸ್ ಮೂರು ಸಮಿತಿಗಳನ್ನು ರಚಿಸಿ ಕಾರ್ಯತಂತ್ರವನ್ನು ರೂಪಿಸಿತ್ತು. ಆದರೆ ಜೆಡಿಎಸ್ ಜಿಲ್ಲಾಧ್ಯಕ್ಷರು ಏನನ್ನೂ ಮಾಡದೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲವೆಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಸುಜುತಿಮ್ಮಯ್ಯ, ಖಲೀಲ್ ಭಾಷ, ಗೀತಾಧರ್ಮಪ್ಪ ಹಾಗೂ ಕಾಂಗ್ರೆಸ್ ಸೇವಾದಳದ ಮಡಿಕೇರಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಉಪಸ್ಥಿತರಿದ್ದರು.