ಅಭ್ಯತ್ ಮಂಗಲದಲ್ಲಿ ಮತ್ತೆ ಕಾಡಾನೆಗಳ ಹಾವಳಿ

ಮಡಿಕೇರಿ ನ.14 : ಅಭ್ಯತ್ ಮಂಗಲ ಗ್ರಾಮದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಎರಡು ದಿನಗಳ ಹಿಂದೆಯಷ್ಟೇ ಮೀನುಕೊಲ್ಲಿ ಅರಣ್ಯ ಪಾಲಕ ಕೂಡಕಂಡಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಕಾಡಾನೆಗಳನ್ನು ದುಬಾರೆ ಅರಣ್ಯಕ್ಕೆ ಓಡಿಸಿದ್ದರು. ಆದರೆ ಇದೀಗ ಮರಿಯಾನೆಯೊಂದಿಗೆ ಎರಡು ಕಾಡಾನೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಅಂಚೆಮನೆ ಅಶ್ವಥ್ ಅವರ ಗದ್ದೆಗಳಿಗೆ ದಾಳಿ ಮಾಡಿರುವ ಆನೆಗಳು ಫಸಲನ್ನು ಸಂಪೂರ್ಣವಾಗಿ ನಾಶ ಪಡಿಸಿವೆ. ಅಂಚೆಮನೆ ಸುಧಾಕರ್ ಎಂಬುವವರ ಕಾಫಿ ತೋಟಕ್ಕೆ ಹಾನಿ ಮಾಡಿವೆ. ಭತ್ತ ಮತ್ತು ಕಾಫಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ್ತಾಗಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಬಾರಿ ಕಾಡಾನೆ ದಾಳಿಯಿಂದ ಉಂಟಾದ ನಷ್ಟಕ್ಕೆ ಇಲ್ಲಿಯವರೆಗೆ ಪರಿಹಾರ ನೀಡಿಲ್ಲ. ತಕ್ಷಣ ಅರಣ್ಯ ಇಲಾಖೆ ಇಲ್ಲಿಯವರೆಗೆ ಕಾಡಾನೆಯಿಂದಾಗಿರುವ ನಷ್ಟವನ್ನು ಭರಿಸಬೇಕೆಂದು ಒತ್ತಾಯಿಸಿದರು. ತ್ಯಾಗತ್ತೂರು ಭಾಗದಲ್ಲಿ ರೈಲ್ವೆ ಕಂಬಿಯಿಂದ ನಿರ್ಮಿಸಲಾಗುತ್ತಿರುವ ತಡೆ ಬೇಲಿ ಕಾಮಗಾರಿ ಅಪೂರ್ಣಗೊಂಡಿರುವುದೇ ಕಾಡಾನೆಗಳ ದಾಳಿಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.