ಕಾರ್ಯಪ್ಪ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಮಹಾಸಭೆ : ಕೊಡಗನ್ನು ಕೊಡಗಾಗಿಯೇ ಉಳಿಸಿ : ಕೆ.ಎಸ್.ದೇವಯ್ಯ ಕರೆ

15/11/2020

ಮಡಿಕೇರಿ ನ.15 : ಎಷ್ಟೇ ಹಣ ನೀಡಿದರೂ ಕೊಡಗಿನಂತಹ ಪ್ರಕೃತಿ, ಪರಿಸರದ ವಾತಾವರಣ ವಿಶ್ವದ ಯಾವ ಮೂಲೆಯಲ್ಲೂ ಸಿಗದು. ಇಂತಹ ಕೊಡಗನ್ನು ಯಾರೂ ಬಿಟ್ಟು ಹೊರ ಊರುಗಳಿಗೆ ತೆರಳದೆ ಕೊಡಗನ್ನು ಕೊಡಗನ್ನಾಗಿಯೇ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ಥಾಪಕಾಧ್ಯಕ್ಷರೂ ಹಾಗೂ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಹೇಳಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ನಡೆದ ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ತೆರಳುವುದು ಅನಿವಾರ್ಯವಾದರೂ ನಂತರದ ದಿನಗಳಲ್ಲಿ ಕೊಡಗಿಗೆ ಹಿಂತಿರುಗುವ ಮೂಲಕ ಈ ಪುಣ್ಯಭೂಮಿ ಕೊಡಗು ಜಿಲ್ಲೆಯನ್ನು ಸಂರಕ್ಷಿಸುವ ಕಾರ್ಯ ಮಾಡಬೇಕೆಂದರು.
ಕೊಡಗು ಜಿಲ್ಲೆಯನ್ನು ಅನೇಕ ಸಮಸ್ಯೆಗಳು ಕಾಡುತ್ತಿದ್ದು, ಅವುಗಳನ್ನು ಬಗೆಹರಿಸುವ ಮತ್ತು ಅಭಿವೃದ್ಧಿಪಥದತ್ತ ಜಿಲ್ಲೆಯನ್ನು ಮುನ್ನಡೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ರಚನೆ ಸಂದರ್ಭ ಅನೇಕ ವಿದ್ಯಾರ್ಥಿಗಳು ಆಗಮಿಸಿದ್ದರು. ಆದರೆ, ಬಂದವರೆಲ್ಲರೂ ಸದಸ್ಯತ್ವ ಪಡೆಯದಿರುವುದು ದುರದೃಷ್ಟಕರ ಎಂದು ದೇವಯ್ಯ ಬೇಸರ ವ್ಯಕ್ತಪಡಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗತ್ ತಿಮ್ಮಯ್ಯ ಅವರು ಮಾತನಾಡಿ, ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಹಳೆ ವಿದ್ಯಾರ್ಥಿಗಳ ಸಂಘದವರ ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ಮಂಗಳೂರು ವಿಶ್ವ ವಿದ್ಯಾಲಯದ ಉಪಕುಲಪತಿಗಳಿಗೆ ಮನದಟ್ಟು ಮಾಡುವುದಾಗಿ ಹೇಳಿದÀÀರು. ಅಭಿವೃದ್ದಿ ಕಾರ್ಯಕ್ರಮಗಳಿಗೆ ಎಲ್ಲರೂ ಕೈಜೋಡಿಸುವಂತೆ ಕೋರಿಕೊಂಡರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಡಾ.ಪಾರ್ವತಿ ಅಪ್ಪಯ್ಯ, ಭೂಲೋಕದ ಸ್ವರ್ಗದಂತಿರುವ ಮಡಿಕೇರಿಯ ಕಾರ್ಯಪ್ಪ ಕಾಲೇಜಿನ ಸರ್ವಾಂಗೀಣ ಅಭಿವೃದ್ದಿಗಾಗಿ ಈಗಾಗಲೇ 5 ಕೋಟಿ ರೂ. ಮಂಜೂರಾಗಿದೆ. ಈಗಾಗಲೇ ಕಾಲೇಜಿನ ಆವರಣದಲ್ಲಿ ನ್ಯಾಕ್ ರೂಮ್ ನ್ನು ನಿರ್ಮಿಸಲಾಗಿದೆ. ಸುತ್ತಲೂ ಕಾಂಪೌಂಡ್ ನಿರ್ಮಿಸಲು 80 ಲಕ್ಷ ರೂ.ನ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಈಗಾಗಲೇ ಕಾಲೇಜಿನ ಮುಖ್ಯಧ್ವಾರಕ್ಕೆ ವಿಶೇಷವಾದ ಗೇಟನ್ನು ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ. ಅರ್ಧ ಎಕರೆಯಲ್ಲಿ ವಿವಿಧ ರೀತಿಯ ಹಣ್ಣು ಹಂಪಲು ಗಿಡಗಳನ್ನು ನೆಟ್ಟು ಪಾಲನೆ ಮಾಡಲಾಗುತ್ತಿದೆ ಎಂದರು.
ಮುಂದಿನ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ರೂ.8 ಲಕ್ಷ ಮೊತ್ತದ ಬೆಳ್ಳಿ ಹಬ್ಬದ ಕೊಠಡಿ ನಿರ್ಮಾಣಕ್ಕೆ ಎಲ್ಲರೂ ಆರ್ಥಿಕ ನೆರವು ನೀಡುವ ಮೂಲಕ ಕೈಜೋಡಿಸುವಂತೆ ಮನವಿ ಮಾಡಿದರು. ವಿಶೇಷ ಸಂಚಿಕೆಗೆ ಲೇಖನ, ಕವನ, ಚುಟುಕು, ಕತೆಗಳನ್ನು ಆಹ್ವಾನಿಸಲಾಗಿದೆ ಎಂದರು.
ಸಂಘದ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಅವರು ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.
ಹಳೇ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ಸಮಾರಂಭದ ಪ್ರಯುಕ್ತ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ಸಮಾರಂಭವನ್ನು ಸಂಘದ ಸದಸ್ಯ ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎನ್.ಡಿ.ಚರ್ಮಣ್ಣ ಸ್ವಾಗತಿಸಿ, ಮಾಜಿ ಅಧ್ಯಕ್ಷೆ ಶೋಭಾ ಸುಬ್ಬಯ್ಯ ವಂದಿಸಿದರು.
ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ಸಮಾರಂಭದಲ್ಲಿ ವಿಶೇಷವಾಗಿ 1949ರಲ್ಲಿ ಸರಕಾರಿ ಕಾಲೇಜಾಗಿ ಆರಂಭವಾದಾಗ ಮೊಟ್ಟ ಮೊದಲ ವಿದ್ಯಾರ್ಥಿಯಾಗಿ ಕಾಲೇಜಿಗೆ ಸೇರಿದ್ದ ಕೇಟೋಳಿರ ಸುಬ್ಬಯ್ಯ ಅವರು ತಮ್ಮ ಇಳಿ ವಯಸ್ಸಿನಲ್ಲೂ ಇಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.