ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕಾಫಿ ಗುಣಮಟ್ಟ ಯಂತ್ರ ಉದ್ಘಾಟನೆ

November 15, 2020

ಮಡಿಕೇರಿ ನ.15 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ತನ್ನ ಸದಸ್ಯರಿಗೆ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರಿಗೆ ಉಪಯೋಗವಾಗುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಇದೀಗ ಸಂಘದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಕಾಫಿ ಗುಣಮಟ್ಟ ಪರಿಶೀಲನಾ ಕೇಂದ್ರವನ್ನು ಲೋಕಾರ್ಪಣೆಗೊಳಿಸಿದೆ.
ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರ ನೇತೃತ್ವದಲ್ಲಿ ಸಂಘ ಮುನ್ನಡೆಯುತ್ತಿದ್ದು, ಸರ್ವಧರ್ಮಗಳ ಪ್ರಮುಖರಾದ ಚೆಟ್ಟಳ್ಳಿಯ ಅರ್ಚಕ ಯೋಗೇಶ್‍ಭಟ್, ಧರ್ಮಗುರುಗಳಾದ ನೂರುದ್ದೀನ್ ಜುಹ್ರಿ ಖತೀಬ್ ಹಾಗೂ ಧರ್ಮಗುರುಗಳಾದ ಫಾದರ್ ಸ್ಟೀಫನ್ ಅಲೆಕ್ಸ್ ನೀರಿನ ಘಟಕವನ್ನು ಉದ್ಘಾಟಿಸಿದರು.
ಮಣಿಉತ್ತಪ್ಪ ಅವರು ಮಾತನಾಡಿ ಸುಮಾರು 25 ವರ್ಷಕ್ಕೂ ಮೊದಲು ನಾನು ಪಂಚಾಯಿತಿ ಉಪಾಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದಾಗ ಚೆಟ್ಟಳ್ಳಿಯಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆಯಾಗಬೇಕೆಂಬ ಕನಸಿತ್ತು. ಆದರೆ ಪ್ರಯತ್ನಗಳು ಫಲಕಾರಿಯಾಗಲಿಲ್ಲ. ಜಿ.ಪಂ ಸದಸ್ಯನಾಗಿ ಆಯ್ಕೆಯಾದ ನಂತರ ಕಾವೇರಿ ನದಿಯಿಂದ ಚೆಟ್ಟಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಪ್ರಯತ್ನಿಸಿದ ಫಲವಾಗಿ ಸರ್ವೆ ನಡೆದು 2 ಕೋಟಿ ರೂ. ಬಿಡುಗಡೆಯಾಗಿ 9 ಲಕ್ಷ ರೂ.ಗಳನ್ನು ಖರ್ಚು ಮಾಡಲಾಯಿತು. ಆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ನಡೆಯಲೇ ಇಲ್ಲ ಎಂದರು.
ನಂತರದಲ್ಲಿ ಚೆಟ್ಟಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಿ ಸಹಕಾರ ಸಂಘದಿಂದಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಡಿ ಊರಿನಜನತೆಗೆ ನೀರಿನ ವ್ಯವಸ್ಥೆಯನ್ನು ಮಾಡಲಾಗಿ ಹಲವು ವರ್ಷಗಳ ಕನಸು ಇಂದು ನನಸಾಗಿದೆಂದರು. ರೂಪಾಯಿ 5 ನಾಣ್ಯವನ್ನು ಹಾಕುವ ಮೂಲಕ ಶುದ್ಧನೀರನ್ನು ಪಡೆದರು.
ಕಾಫಿ ಗುಣಮಟ್ಟ ಪರೀಕ್ಷಾ ಕೆಂದ್ರವನ್ನು ಕಾಫಿ ಬೆಳೆಗಾರರಾದ ಅಯ್ಯಂಡ್ರ ಸಿ.ರಾಘವಯ್ಯ, ಬಿದ್ದಂಡ ಎ.ಅಚ್ಚಯ್ಯ, ಹೊಸಮನೆ ಟಿ ಪೂವಯ್ಯ, ಸ್ಥಳೀಯ ವ್ಯಾಪಾರಸ್ಥರಾದ ಇಸ್ಮಾಯಿಲ್ ಉದ್ಗಾಟಿಸಿದರು.
ಬಲ್ಲಾರಂಡ ಮಣಿಉತ್ತಪ್ಪ ಮಾತನಾಡಿ, ಬೆಳೆಗಾರರು ತಾವು ಬೆಳೆದ ಕಾಫಿಹಾಗು ಕರಿಮೆಣಸಿನ ಗುಣಮಟ್ಟವನ್ನು ಸಂಘ ದಲ್ಲಿರುವ ಪರೀಕ್ಷಣಾ ಘಟಕದಲ್ಲಿ ಪರೀಕ್ಷಿಸಿಕೊಳ್ಳುವ ಮೂಲಕ ಸಂಘದಲ್ಲಿ ಸ್ಥಾಪಿಸಲಾದ ಕಾಫಿಗುಣಮಟ್ಟ ಪರಿಶೀಲನಾ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಮುಂದಿನ ತಿಂಗಳಲ್ಲಿ ಸಹಕಾರ ಸಂಘದ ಮೇಲಂತಸ್ತಿನ ನೂತನ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಸ್.ತಿಮ್ಮಪಯ್ಯ, ಕಾಫಿ ಬೆಳೆಗಾರರಾದ ಚೇರಳತಮ್ಮಂಡ ಆನಂದ, ಪುತ್ತರಿರ ಕೆ.ದೇವಯ್ಯ, ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ಮುಳ್ಳಂಡ ಮಾಯಮ್ಮ, ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಬಲ್ಲಾರಂಡ ಕಂಠಿಕಾರ್ಯಪ್ಪ, ಕಾಫಿ ಬೆಳೆಗಾರ ಮುಳ್ಳಂಡ.ಟಿ.ಚಂಗಪ್ಪ, ವಾಲ್ನೂರು ಪಂಚಾಯಿತಿಯ ಮಾಜಿ ಅಧ್ಯಕ್ಷ ಅಂಚೆಮನೆಸುಧಿ, ಸಹಕಾರ ಸಂಘದ ನಿರ್ದೇಶಕರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

error: Content is protected !!