ಕೊಡವ ಮಕ್ಕಡ ಕೂಟದ ವತಿಯಿಂದ 46ನೇ ಪುಸ್ತಕ “ಕಲ್ಪನೆಯ ಕನ್ನಡಿ” ಲೋಕಾರ್ಪಣೆ

17/11/2020

ಮಡಿಕೇರಿ ನ.17 : ಕೊಡವ ಆಚಾರ, ವಿಚಾರ, ಕೊಡವ ಕ್ರೀಡಾ ಪಟುಗಳು, ಕೊಡವ ವೀರಯೋಧರು ಸೇರಿದಂತೆ ವಿವಿಧ ಕ್ಷೇತ್ರಗಳ ಕೊಡವ ಸಾಧಕರ ಬಗ್ಗೆ ಹಲವು ದಾಖಲೀಕರಣ ಪುಸ್ತಕಗಳನ್ನು ಹೊರ ತಂದಿರುವ ಕೊಡವ ಮಕ್ಕಡ ಕೂಟ ಸಂಘಟನೆ ತನ್ನ 46 ನೇ ಪುಸ್ತಕ ಕಾಯಪಂಡ ಸಿ.ದೇವಯ್ಯ ರಚಿತ “ಕಲ್ಪನೆಯ ಕನ್ನಡಿ” ಯನ್ನು ಲೋಕಾರ್ಪಣೆಗೊಳಿಸಿತು.
ನಗರದ ಪತ್ರಿಕಾಭವನದಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.
ಕನ್ನಡಾಭಿಮಾನ ಕುಗ್ಗುತ್ತಿರುವ ಈ ದಿನಗಳಲ್ಲಿ ಹೊಸ ಹೊಸ ಬರಹಗಾರರು ಹುಟ್ಟಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಕ್ಷರದ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯವೆಂದರು. ಕಾಯಪಂಡ ಸಿ.ದೇವಯ್ಯ ಅವರು ಬರೆದಿರುವ ಪ್ರಥಮ ಪುಸ್ತಕ “ಕಲ್ಪನೆಯ ಕನ್ನಡಿ”ಯಲ್ಲಿ ಎಲ್ಲಾ ವಯೋಮಾನದವರು ಹಾಗೂ ವಿಭಿನ್ನ ಅಭಿರುಚಿ ಉಳ್ಳವರು ಇಷ್ಟಪಡುವ ಅಂಶಗಳಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಣ್ಣ ಪುಸ್ತಕವಾದರೂ ದೊಡ್ಡ ಅರ್ಥಗಳನ್ನು ಹೊಂದಿದೆ ಎಂದು ತಿಳಿಸಿದ ಅಪ್ಪಣ್ಣ ಅವರು, ಸಾಹಿತ್ಯ ಕ್ಷೇತ್ರಕ್ಕೆ ಮತ್ತಷ್ಟು ಪುಸ್ತಕಗಳು ಸೇರ್ಪಡೆಯಾಗಬೇಕೆಂದರು. ಕೊಡವ ಮಕ್ಕಡ ಕೂಟದ ಕಾರ್ಯವನ್ನು ಅವರು ಇದೇ ಸಂದರ್ಭ ಶ್ಲಾಘಿಸಿದರು.
“ಕಲ್ಪನೆಯ ಕನ್ನಡಿ”ಯ ರಚನೆಕಾರ ಕಾಯಪಂಡ ಸಿ.ದೇವಯ್ಯ ಅವರು ಮಾತನಾಡಿ ಕಳೆದ ಅನೇಕ ವರ್ಷಗಳಿಂದ ಕಥೆ, ಕವನಗಳನ್ನು ಬರೆಯುತ್ತಿದ್ದು, ಭಾವನೆಗಳಿಗೆ ಅಕ್ಷರದ ಸ್ಪರ್ಷ ನೀಡುವ ಕಾಯಕ ಮನಸ್ಸಿಗೆ ತೃಪ್ತಿಯನ್ನು ನೀಡುತ್ತಿದೆ ಎಂದರು. ತಮ್ಮ ಮುಂದಿನ ಪುಸ್ತಕದಲ್ಲಿ ಪ್ರೇಮಗೀತೆಗಳಿರುತ್ತವೆ ಎಂದು ಅವರು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಕೊಡವ ಭಾಷೆ ಸೇರಿದಂತೆ ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಯಲ್ಲೂ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕೂಟ ಕೊಡವ ಸಾಧಕರ ಬಗ್ಗೆ ವಿಶ್ವ ಮಟ್ಟಕ್ಕೆ ತಿಳಿಸುವ ಅದ್ಭುತ ಕಾರ್ಯವನ್ನು ಮಾಡುತ್ತಾ ಬಂದಿದೆ. ಹೊಸ ಬರಹಗಾರರು ಹಾಗೂ ಯುವ ಬರಹಗಾರರನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡಿ, ಪುಸ್ತಕವನ್ನು ಬರೆಸಿ ಪ್ರಕಟಿಸುತ್ತಿರುವುದು ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.
ಉಳುವಂಗಡ ಕಾವೇರಿ ಉದಯ ರಚಿತ “ಕೊಡಗ್ರ ಸಿಪಾಯಿ” ಪುಸ್ತಕವನ್ನು ಕೂಟದ ಮೂಲಕ ಹೊರ ತರಲಾಗಿದ್ದು, ಇದು ಚಲನಚಿತ್ರವಾಗಿ ತೆರೆ ಕಂಡಿದೆ. ಉಳಿದಂತೆ ಪವಳ ಸಾಲ್, ಆಟ್ ಪಾಟ್ ಪಡಿಪು, ಚಾಯಿ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಕೊಡವಾಮೆಕ್ ಬಂದಲಕೆ, ಬಲ್ಲಾದ ಪಳಮೆ, ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ. ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ (2ನೇ ಮುದ್ರಣ), ಆಟ್ ಪಾಟ್ ಪಡಿಪು (3 ನೇ ಮುದ್ರಣ), ಕುಂಞ ಪುಟ್ಟ್‍ನಲ್ಲಿ, ದೀವಾನ್ ಚೆಪ್ಪುಡಿರ ಪೆÇನ್ನಪ್ಪ, ವಾಲ್ಮೀಕಿ ರಾಮಾಯಣ, ಕೊಡವ ಕ್ರೀಡಾ ಕಲಿಗಳು, ಕೊಡವ ಭಾಗವತ, ಆಟ್ ಪಾಟ್ ಪಡಿಪು (4 ನೇ ಮುದ್ರಣ), ಅಪ್ಪಚ್ಚ ಕವಿರ ನೆಪ್ಪು, 1785 ಕೂರ್ಗ್ (ಟಿಪ್ಪೂಸ್ ಡೈರಿ), Kodagu Principality V/s British Emipire, ಕೊಡಗ್ರ ಸಂಗೀತ ಸಾಹಿತ್ಯ ಕಲಾವಿದಂಗ, ಕೊಡಗಿನ ಸಂಗೀತ ಸಾಹಿತ್ಯ ಕಲಾವಿದರು, The Major who kept his cool, ಚಿಗುರೆಲೆಗಳು, ಪುಣ್ಯಕ್ಷೇತ್ರ ಪರಿಚಯ, ಹಣ್ಣೆಲೆ ಚಿಗುರೆಲೆ, ಆಟ್ ಪಾಟ್ ಪಡಿಪು (5 ನೇ ಮುದ್ರಣ), ಪೆÇಂಜಂಗ್, ಮಹಾವೀರ ಅಚ್ಚುನಾಯಕ, ವಿಧಿರ ಕಳಿಲ್, ಕರಗಿದ ಬದುಕು, ಆರೋಗ್ಯ ಮತ್ತು ಸಾಮಾನ್ಯ ರೋಗಗಳಿಗೆ ಗೃಹ ಚಿಕಿತ್ಸೆಗಳು, ಪುಣ್ಯ ಮಂದಿರ್ (ಹಿಂದಿ), Musical Stars of Coorg,   ವೀರಚಕ್ರ, ಮೋಹ ಪಾಶ, ಬದ್ಕ್ ಪಿಂಚ ದೇಚವ್ವ (2 ಕೊಡವ ನಾಟಕ), ಪಾಂಚಜನ್ಯ, The Gandhi of Kodagu, ಆಂಜ ಮುತ್ತ್ ಮತ್ತು ಇಂದು ಕಲ್ಪನೆಯ ಕನ್ನಡಿ ಪುಸ್ತಕವನ್ನು ಹೊರ ತರಲಾಗಿದೆ ಎಂದು ಅಯ್ಯಪ್ಪ ಮಾಹಿತಿ ನೀಡಿದರು.
ಇದೇ ನ.22 ರಂದು ಕೂಟದ ವತಿಯಿಂದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ದಂಪತಿ ದಾಖಲೀಕೃತ ಒತ್ತಜೋಡಿ, ಚಂಗೀರ, ಅಪ್ಪಣ್ಣ ದಂಪತಿ ಕಂಡ ಅಮೇರಿಕಾ ಹಾಗೂ ಅಪ್ಪಣ್ಣ ದಂಪತಿ ಕಂಡ ಯೂರೋಪ್ ಎಂಬ ನಾಲ್ಕು ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
::: ಕೂಟಕ್ಕೆ ಅಧ್ಯಕ್ಷರಾಗಲು ಅವಕಾಶ :::
ಕಳೆದ ಎಂಟು ವರ್ಷಗಳಿಂದ ಕೊಡವ ಮಕ್ಕಡ ಕೂಟದ ಅಧ್ಯಕ್ಷನಾಗಿ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ನ್ಯಾಯ ಒದಗಿಸಿದ ತೃಪ್ತಿ ಇದೆ. ಮಡಿಕೇರಿಯ ಹೃದಯ ಭಾಗದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಮುಂದಿನ ದಿನಗಳಲ್ಲಿ ನಾನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ಉದ್ದೇಶ ಹೊಂದಿದ್ದು, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಸ್ಥಾನವನ್ನು ಬಿಟ್ಟು ಕೊಡುವುದಾಗಿ ಅಯ್ಯಪ್ಪ ತಿಳಿಸಿದರು.
ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಳ್ಳಬಲ್ಲ ಉತ್ಸಾಹಿ ಯುವಕರು ಮುಂದೆ ಬಂದಲ್ಲಿ ನ.22 ರಂದೇ ಅಧಿಕಾರವನ್ನು ಹಸ್ತಾಂತರಿಸುವುದಾಗಿ ಹೇಳಿದರು.
::: ಕಲ್ಪನೆಯ ಕನ್ನಡಿ ಲೇಖಕರ ಪರಿಚಯ :::
ಕಾಯಪಂಡ ಸಿ. ದೇವಯ್ಯ (ಕೆ.ಸಿ.ದೇವಯ್ಯ)
ಕಾಯಪಂಡ ಚಿಟ್ಟಿಯಣ್ಣ ದೇವಯ್ಯ (ಕೆ.ಸಿ.ದೇವಯ್ಯ) ಮಡಿಕೇರಿಯಲ್ಲಿ ಜನಿಸಿ, ಮಡಿಕೇರಿಯಹತ್ತನೇ ತರಗತಿ ಮುಗಿಸಿ, F.M.K.M.C. College ನಲ್ಲಿ PU.C. ಕಲಿತು, ನಂತರ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ B.SC., (Ag) ಮತ್ತು ತಮಿಳುನಾಡಿನಲ್ಲಿ Coanoor ನಲ್ಲಿ Tea Plantation Management, P.G. Diploma ಮುಗಿಸಿ, ಕೇರಳದ ಪ್ರತಿಷ್ಠಿತ Harrisons Malayalam Ltd. Company ಯಲ್ಲಿ 23 ವರ್ಷ ಸೇವೆ ಸಲ್ಲಿಸಿ, G.M. Operations ಆಗಿ ಸೇವಾ ವಿಮುಕ್ತಿ ಹೊಂದಿದರು. ಪ್ರಸ್ತುತ ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯಲ್ಲಿ Bethel Planations Pvt. Ltd. Company ಯಲ್ಲಿ G.M.ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ಸಂಪೂರ್ಣ ವೃತ್ತಿ ಜೀವನವಾದ ಕಳೆದ 28 ವರ್ಷಗಳನ್ನು ಕೇರಳದಲ್ಲೇ ಸವೆಸುತ್ತಿರುವ ಇವರು, ಕನ್ನಡಾಭಿಮಾನವನ್ನು ತೊರೆಯಲೇ ಇಲ್ಲ. ತಮ್ಮ ಕಾಲೇಜು ಜೀವನದ ನಂತರ ಬರೆಯುವ ಹವ್ಯಾಸ ತೊಡಗಿಸಿಕೊಂಡ ಇವರು, ನೂರೈವತ್ತಕ್ಕೂ ಮೀರಿ ಕವನಗಳನ್ನು ರಚಿಸಿದ್ದಾರೆ, ರಚಿಸುತ್ತಿದ್ದಾರೆ.
ಕವನ ಬರೆಯುವುದಲ್ಲದೆ, ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಇರಿಸಿಕೊಂಡಿರುವ ಇವರು, ಈಗಲೂ ಬಿಡುವಿದ್ದಾಗ ತಮ್ಮ ಸಮಯವನ್ನು ಈ ಹವ್ಯಾಸಗಳಿಗೆ ಮೀಸಲಿರಿಸುತ್ತಾರೆ.
ಸುದ್ದಿಗೋಷ್ಠಿಯಲ್ಲಿ ಕೂಟದ ಗೌರವ ಕಾರ್ಯದರ್ಶಿ ಪುತ್ತರಿರ ಕರುಣ್ ಕಾಳಯ್ಯ, ಸಮಾಜ ಸೇವಕರಾದ ಪಟ್ರಪಂಡ ಪಿ.ಸೋಮಣ್ಣ (ಶ0ಭು) ಹಾಗೂ ಪ್ರಮುಖರಾದ ಬಲ್ಲಚಂಡ ಎ.ಗಣಪತಿ(ಗಪ್ಪು) ಉಪಸ್ಥಿತರಿದ್ದರು.