ನ.30 ರಂದು ಕೊಡಗಿನ ಸುಗ್ಗಿ ಹಬ್ಬ ‘ಪುತ್ತರಿ’ ಆಚರಣೆ

November 17, 2020

ಮಡಿಕೇರಿ ನ.17 : ಕೊಡಗಿನ ಸುಗ್ಗಿಯ ಹಬ್ಬ ‘ಪುತ್ತರಿ’ಯನ್ನು ನ.30 ರಂದು ನಾಡಿನಾದ್ಯಂತ ಆಚರಿಸಲು ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಮುಹೂರ್ತವನ್ನು ನಿಗದಿಪಡಿಸಲಾಯಿತು.
ಸಂಪ್ರದಾಯದಂತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ದೇವಸ್ಥಾನದ ತಕ್ಕಮುಖ್ಯಸ್ಥರನ್ನು ಒಳಗೊಂಡಂತೆ ಗಣ್ಯರ ಉಪಸ್ಥಿತಿಯಲ್ಲಿ ಪುತ್ತರಿ ಹಬ್ಬದ ದಿನವನ್ನು ಸಂಪ್ರದಾಯದಂತೆ ಅಮ್ಮಂಗೇರಿ ಜ್ಯೋತಿಷ್ಯರು ನಿಗದಿ ಪಡಿಸಿದರು.
ಪುತ್ತರಿ ಹಬ್ಬವನ್ನು ಶ್ರೀ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನ.30ರಂದು ಮೊದಲು ಆಚರಿಸಲಾಗುತ್ತದೆ. ಅಂದು ರಾತ್ರಿ ರೋಹಿಣಿ ನಕ್ಷತ್ರದಲ್ಲಿ 7.15 ಗಂಟೆಗೆ ನೆರೆಕಟ್ಟಿ, 8.15 ಗಂಟೆಗೆ ಕದಿರು ತೆಗೆದು, 9.15 ಗಂಟೆಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ.
ಕೊಡಗು ಜಿಲ್ಲೆಯಾದ್ಯಂತ ಅಂದು ರಾತ್ರಿ 7.45 ಗಂಟೆಗೆ ನೆರೆ ಕಟ್ಟಿ, 8.45 ಗಂಟೆಗೆ ಕದಿರು ತೆಗೆದು, 9.45 ಗಂಟೆಗೆ ಪ್ರಸಾದ ಸ್ವೀಕರಿಸಲು ಮುಹೂರ್ತ ನಿಗದಿಪಡಿಸಲಾಗಿದೆಯೆಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನ ವ್ಯವಸ್ಥಾಪನಾ ನಿಧಿ ಸಮಿತಿಯ ಪ್ರಕಟಣೆ ತಿಳಿಸಿದೆ.
ಪುತ್ತರಿ ಹಬ್ಬದ ಮುನ್ನಾ ದಿನವಾದ ನ.29 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇಗುಲದಲ್ಲಿ ಕೃತ್ತಿಕಾ ನಕ್ಷದಲ್ಲಿ ಹಬ್ಬ ನಡೆಸಲು ಇದೇ ಸಂದರ್ಭ ಮುಹೂರ್ತವನ್ನು ನಿಗದಿಪಡಿಸಲಾಗಿದೆ.

error: Content is protected !!