ಭಾಗಮಂಡಲ ದೇವಾಲಯಕ್ಕೆ ಸೇರಿದ ಜಮೀನು ಒತ್ತುವರಿ ತೆರವಿಗೆ ಆಗ್ರಹ : ಕೊಡಗು ಏಕೀಕರಣ ರಂಗದಿಂದ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ

17/11/2020

ಮಡಿಕೇರಿ ನ.17 : ತಲಕಾವೇರಿ-ಭಾಗಮಂಡಲ ಕ್ಷೇತ್ರದ ಶ್ರೀಭಗಂಡೇಶ್ವರ ದೇವಸ್ಥಾನಕ್ಕೆ ಸೇರಿದ 156.04 ಏಕರೆಯಷ್ಟು ಜಮೀನು ಒತ್ತುವರಿಯಾಗಿದ್ದು, ಇದನ್ನು ಶೀಘ್ರ ತೆರವುಗೊಳಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಒತ್ತುವರಿದಾರರ ವಿರುದ್ಧ ಸರ್ಕಾರಿ ಜಮೀನು ಒತ್ತುವರಿ ನಿರ್ಬಂಧಿಸುವ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕೊಡಗು ಏಕೀಕರಣ ರಂಗ ಎಚ್ಚರಿಕೆ ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗದ ಪ್ರಮುಖರಾದ ಅಪ್ಪಚ್ಚು ಸತೀಶ್, ಪ್ರಮೋದ್ ಸೋಮಯ್ಯ ಹಾಗೂ ತಮ್ಮುಪೂವಯ್ಯ ಅವರುಗಳು ಶ್ರೀಭಗಂಡೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಹೋಬಳಿ ತಾವೂರು, ತಣ್ಣಿಮಾನಿ ಮತ್ತು ಭಾಗಮಂಡಲ ಗ್ರಾಮಗಳಲ್ಲಿರುವ ಒಟ್ಟು 195.90ಏಕರೆ ಜಮೀನಿನಲ್ಲಿ 156.04 ಏಕರೆಯನ್ನು 71ಮಂದಿ ಒತ್ತುವರಿ ಮಾಡಿಕೊಂಡಿರುವುದಾಗಿ ಆರೋಪಿಸಿದರು.
ಅತಿಕ್ರಮಣವನ್ನು ತೆರವು ಗೊಳಿಸಿ ದೇವಾಲಯಕ್ಕೆ ಮರಳಿ ಜಮೀನನ್ನು ದೊರಕಿಸಿಕೊಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಒತ್ತುವರಿದಾರರ ವಿರುದ್ಧ 2011ರ ಕರ್ನಾಟಕ ಸರಕಾರಿ ಜಮೀನು ಒತ್ತುವರಿ ನಿರ್ಬಂಧಿಸುವ ಕಾಯ್ದೆ(ಲ್ಯಾಂಡ್ ಗ್ರ್ಯಾಬಿಂಗ್ ಆಕ್ಟ್)ಯಡಿ ಕ್ರಿಮಿನಲ್ ಮೊಕದಮ್ಮೆ ಹೂಡಲು ಸಿದ್ಧರಿರುವುದಾಗಿ ಸ್ಪಷ್ಟಪಡಿಸಿದರು.
ಭೂದಾಖಲೆಗಳ ಇಲಾಖೆಯ ಸರ್ವೇಯಿಂದ ಶ್ರೀಭಗಂಡೇಶ್ವರ ಸೇರಿದಂತೆ ಕೊಡಗಿನ ಮುಜರಾಯಿ ಇಲಾಖೆಗೆ ಒಳಪಟ್ಟ ಸಾಕಷ್ಟು ಜಮೀನು ಒತ್ತುವರಿಯಾಗಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಏಕೀಕರಣ ರಂಗ 2013 ರಲ್ಲೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಶ್ರೀಭಗಂಡೇಶ್ವರ ಸೇರಿದಂತೆ ಮುಜರಾಯಿ ದೇವಸ್ಥಾನಗಳ ಒತ್ತುವರಿ ಜಮೀನು ತೆರವಿಗೆ ಒತ್ತಾಯಿಸಿತ್ತು. ಇದನ್ನು ಸಾಕಷ್ಟು ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದಿತ್ತಾದರು, ಇಲ್ಲಿಯವರೆಗೆ ಜಮೀನು ತೆರವಿಗೆ ಸಂಬಂಧಿಸಿದಂತೆ ಸೂಕ್ತ ಸ್ಪಂದನ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಶ್ರೀಭಗಂಡೇಶ್ವರ ದೇವಸ್ಥಾನಕ್ಕೆ ಒಳಪಟ್ಟ ಜಮೀನಿನ ಒತ್ತುವರಿದಾರರು ಬಡತನ ರೇಖೆಗಿಂತ ಕೆಳಗಿರುವ ಭೂರಹಿತ ಕುಟುಂಬಗಳಿಗೆ ಸೇರಿದವರಲ್ಲ. ಕೆಲವರಂತು ತಲಕಾವೇರಿ ಮತ್ತು ಭಗಂಡೇಶ್ವರ ದೇವಾಲಯಗಳ ಪರಂಪರೆ ಸಂರಕ್ಷಣೆಯ ವಿಚಾರದಲ್ಲಿ ಆಸಕ್ತರಾಗಿ, ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ವ್ಯಕ್ತಿಗಳೇ ಆಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಸಂಖ್ಯಾತ ಭಕ್ತರ ಶ್ರದ್ಧಾ ಕೇಂದ್ರ್ರವಾಗಿರುವ ಕಾವೇರಿ ಕ್ಷೇತ್ರಕ್ಕೆ ಒಳಪಟ್ಟ ಜಮೀನಿನ ಒತ್ತುವರಿ ವಿಚಾರ, ಕ್ಷೇತ್ರದ ಸಂರಕ್ಷಣೆÉಯ ಬಗ್ಗೆ ಆಸಕ್ತರಾಗಿರುವ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದ ಪ್ರಮುಖರು, ಕ್ಷೇತ್ರದ ಜಮೀನು ಒತ್ತುವರಿಯ ಬಗ್ಗೆ ಇವರುಗಳು ತಮ್ಮ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುವ ಅಗತ್ಯವಿದೆ. ಇಲ್ಲದಿದ್ದಲ್ಲಿ ಇವರು ಕೂಡ ಪ್ರಭಾವಕ್ಕೆ ಮಣಿದಿದ್ದಾರೆ ಎನ್ನುವುದು ಖಾತ್ರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಒತ್ತುವರಿ ತೆರವಿನ ವಿಚಾರವನ್ನು ಒಂದು ದಶಕಕ್ಕೂ ಅಧಿಕ ಕಾಲ ತಡೆಹಿಡಿದ ಆ ಅಗೋಚರ ಶಕ್ತಿ ಯಾವುದು ಎಂಬುದೇ ನಮಗೆ ಅರಿವಾಗುತ್ತಿಲ್ಲ. ಅದು ಸರಕಾರ ಮತ್ತು ಜಿಲ್ಲಾಡಳಿತದ ನಿಷ್ಕ್ರೀಯತೆಯೇ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ, ಒತ್ತುವರಿದಾರರ ಪ್ರಭಾವವೇ, ಸ್ವಜನ ಪಕ್ಷಪಾತವೇ ಅಥವಾ ಜಾತಿಯ ನೆಲೆಗಟ್ಟಿನ ಲೆಕ್ಕಾಚಾರವೇ ಎಂಬುದು ನಮಗೆ ಅರ್ಥವಾಗುತ್ತಿಲ್ಲವೆಂದು ತಿಳಿಸಿದರು.
ಶ್ರೀಭಗಂಡೇಶ್ವರ ದೇವಾಲಯದ ಜಮೀನಿನ ಒತ್ತುವರಿ ತೆರವಿನ ವಿಚಾರದಲ್ಲಿ ಇಲ್ಲಿಯವರೆಗಿನ ವೈಫಲ್ಯಕ್ಕೆ ಕಾರಣವಾದ ಅಂಶಗಳನ್ನು ಸ್ಥಳೀಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರುಗಳು ಜನರ ಮುಂದಿಡುವಂತೆ ಆಗ್ರಹಿಸಿದ ಅವರು, ವೈಫಲ್ಯಕ್ಕೆ ಜಿಲ್ಲಾಡಳಿತದ ನಿಷ್ಕ್ರೀಯತೆ ಕಾರಣವಾಗಿದ್ದಲ್ಲಿ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು.
::: ಬೇಡಿಕೆಗಳು :::
ಪ್ರತಿ ವರ್ಷ ತಲಕಾವೇರಿ ತೀರ್ಥೋದ್ಭವದ ಸಮಯದಲ್ಲಿ ಕಾವೇರಿಯ ಬಗ್ಗೆ ಹಲವು ಸಂಘಟನೆಗಳಿಗೆ, ಕೊಡವ ಸಮಾಜ, ಗೌಡ ಸಮಾಜಗಳಿಗೆ ಮತ್ತು ಸ್ಥಳೀಯರಿಗೆ ಕಾವೇರಿಯ ಬಗ್ಗೆ ಮತ್ತು ಅಲ್ಲಿಯ ಆಚಾರ ವಿಚಾರಗಳ ಬಗ್ಗೆ ಕಾಳಜಿ ಉಕ್ಕಿ ಹರಿಯುತ್ತದೆ. ಆದರೆ ಈ ಸಂಘ ಸಂಸ್ಥೆಗಳು ಇಲ್ಲಿಯವರೆಗೂ ಈ ಗಂಭೀರ ಸಮಸ್ಯೆಯ ಬಗ್ಗೆ ಚಕಾರ ಎತ್ತಿಲ್ಲ. ತಲಕಾವೇರಿಯ ಬಗ್ಗೆ ಅವರ ಕಾಳಜಿ ತೀರ್ಥೋದ್ಭವದ ವೀಕ್ಷಣೆಗೆ ಆಯಕಟ್ಟಿನ ಸ್ಥಳ ಗಿಟ್ಟಿಸಿಕೊಳ್ಳುವ ಮತ್ತು ತೀರ್ಥೋದ್ಭವದ ವೀಕ್ಷಣೆಗೆ ಬರುವ ವಿಐಪಿಗಳೊಂದಿಗೆ ಗುರುತಿಸಿಕೊಳ್ಳುವುದಕ್ಕೆ, ಪತ್ರಿಕಾಗೋಷ್ಠಿಗೆ ಮತ್ತು ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿರುವಂತ್ತಿದೆ ಎಂದು ಪ್ರಮುಖ ಟೀಕಿಸಿದರು. ತಲಕಾವೇರಿ- ಭಗಂಡೇಶ್ವರ ದೇವಾಲಯದ ಜಮೀನಿನ ಒತ್ತುವರಿಯ ವಿಚಾರದಲ್ಲಿ ಈ ಸಂಘ ಸಂಸ್ಥೆಗಳು ತಮ್ಮ ನಿಲುವನ್ನು ಮೊದಲು ಸ್ಪಪ್ಟಪಡಿಸಬೇಕು.
ರಾಜ್ಯ ಸರ್ಕಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರನ್ನು ಕರ್ನಾಟಕ ರಾಜ್ಯ ಸಕರಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿದೆ. ತಲಕಾವೇರಿ- ಭಗಂಡೇಶ್ವರ ದೇವಾಲಯದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ದ ನಿರ್ದಾಕ್ಷಣ್ಯ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವ ಸುವರ್ಣ ಅವಕಾಶ ಮತ್ತು ಅಧಿಕಾರವನ್ನು ಅವರು ಚಲಾಯಿಸಲಿ ಎಂದು ಪ್ರಮುಖರು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರು ಜಾರಿಗೆ ತಂದ ಉಳುವವನಿಗೆ ಭೂಮಿ ಎನ್ನುವ ಕಾನೂನು ದೇವಾಲಯಗಳು ಮತ್ತು ಮಠಗಳ ಜಮೀನಿಗೆ ಅನ್ವಯಿಸುವುದಿಲ್ಲ. ಆದರೂ 1973ರಲ್ಲಿ ಉಳುವವನಿಗೆ ಭೂಮಿ ಕಾಯ್ದೆಯಡಿ ರೂಪುಗೊಂಡ ಭೂನ್ಯಾಯ ಮಂಡಳಿಯಲ್ಲಿ ಆಯಕಟ್ಟಿನ ಸ್ಥಳದಲ್ಲಿದ್ದ ಕೊಡಗಿನ ಕೆಲ ಜನಪ್ರತಿನಿಧಿಗಳು ತಲಕಾವೇರಿ- ಭಗಂಡೇಶ್ವರ ದೇವಾಲಯದ ಜಮೀನನ್ನು ಮಂಜೂರು ಮಾಡಿದ್ದರು. ಆ ಮೂಲಕ ತಲಕಾವೇರಿ- ಭಗಂಡೇಶ್ವರ ಕ್ಷೇತ್ರಕ್ಕೆ, ಕೊಡಗು ಜಿಲ್ಲೆಗೆ ಸರಿ ಪಡಿಸಲಾಗದ ದ್ರೋಹ ಎಸಗಿದ್ದರು ಎಂದು ಆರೋಪಿಸಿದರು.
ಭಾರತೀಯ ಜನತಾ ಪಕ್ಷದ ಮೂಲಕ ಆಯ್ಕೆಯಾಗಿರುವ ಕೆ.ಜಿ.ಬೋಪಯ್ಯ ಅವರು 1970 ಮತ್ತು 1980ನೇ ದಶಕದ ಜನಪ್ರತಿನಿಧಿಗಳ ಸಾಲಿಗೆ ಸೇರದೆ, ತಲಕಾವೇರಿ- ಭಗಂಡೇಶ್ವರ ಕ್ಷೇತ್ರದ ಜಮೀನಿನ ಸಂರಕ್ಷಣೆಗೆ ತಮ್ಮ ಅಧಿಕಾರವನ್ನು ಬಳಸುವಂತಾಗಲಿ ಎಂದು ಒತ್ತಾಯಿಸಿದರು.
ದೇವಾಲಯದ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರ ಬಗ್ಗೆ ಸಾರ್ವಜನಿಕ ಜನಾಭಿಪ್ರಾಯ ರೂಪಿಸುವ ಕಾರ್ಯದ ನೇತೃತ್ವವನ್ನು ಕ್ಷೇತ್ರದ ತಕ್ಕರಾದ ಕೋಡಿ ಮತ್ತು ಬಳಡ್ಕ ಕುಟುಂಬಸ್ಥರು, ನಮಾಮಿ ಕಾವೇರಿ ಯೋಜನೆಯ ಕಾರ್ಯಾಧ್ಯಕ್ಷರಾದ ಕೋಡಿ ಪೊನ್ನಪ್ಪ, ಸ್ಥಳೀಯರಾದ ಕುದುಕುಳಿ ಭರತ್ ಅವರುಗಳು ವಹಿಸಿಕೊಳ್ಳಲಿ ಎಂದು ಒತ್ತಾಯಿಸಿದ ಅವರು, ಈ ಕಾರ್ಯವನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ಕಾವೇರಿಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಳ್ಳಲಿದ್ದಾರೆ ಎಂದರು.
ಒತ್ತುವರಿದಾರರು ಸ್ವಯಂ ಪ್ರೇರಿತರಾಗಿ ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ದೇವಾಲಯದ ವಶಕ್ಕೆ ಒಪ್ಪಿಸಲಿ ಎಂದು ಮನವಿ ಮಾಡಿದರು.
ಒತ್ತುವರಿ ತೆರವಿನ ಬೇಡಿಕೆ ಕೇವಲ ಭಾಗಮಂಡಲಕ್ಕೆ ಸೀಮಿತವಾಗಿಲ್ಲ, ಪಾಡಿಶ್ರೀ ಇಗ್ಗುತ್ತಪ್ಪ, ಪಾಲೂರು, ಶ್ರೀಓಂಕಾರೇಶ್ವರ ದೇವಾಲಯ ಸೇರಿದಂತೆ ಮುಜರಾಯಿಗೆ ಸಂಬಂಧಿಸಿದ ದೇವಾಲಯಗಳ ಜಮೀನಿನ ಒತ್ತುವರಿಯನ್ನು ಕೂಡ ತೆರವುಗೊಳಿಸಬೇಕೆನ್ನುವ ಒತ್ತಾಯ ನಮ್ಮದೆಂದು ಪ್ರಮುಖರು ಸ್ಪಷ್ಟಪಡಿಸಿದರು.