ಕೋವಿ ಕಡತ ವಿಲೇವಾರಿ ಸರಳೀಕರಿಸಿ : ಸಾರ್ವಜನಿಕ ಹಿತರಕ್ಷಣಾ ಸಮಿತಿ ಒತ್ತಾಯ

17/11/2020

ಮಡಿಕೇರಿ ನ.17 : ಕೊಡಗಿನ ಬೆಳೆಗಾರರು ಬೇರೆಯವರಿಗೆ ಕೋವಿಯನ್ನು ವರ್ಗಾಯಿಸಲು ಮತ್ತು ಹೊಸದಾಗಿ ಕೋವಿಯನ್ನು ಖರೀದಿಸಲು ಇರುವ ನಿಯಮವನ್ನು ಸರಳೀಕರಿಸಬೇಕೆಂದು ಒತ್ತಾಯಿಸಿ ಸಾರ್ವಜನಿಕ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಸಮಿತಿಯ ಅಧ್ಯಕ್ಷ ಎ.ಎಸ್.ಕಟ್ಟಿಮಂದಯ್ಯ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಪ್ರಮುಖರು ಕೋವಿ ಕಡತ ವಿಲೇವಾರಿ ಸಮಸ್ಯೆ ಕುರಿತು ವಿವರಿಸಿದರು.
ಕೊಡಗಿನ ಬೆಳೆಗಾರರು ತಮ್ಮ ಕೋವಿಯನ್ನು ಬೇರೆಯವರಿಗೆ ವರ್ಗಾಯಿಸಲು ಮತ್ತು ಹೊಸದಾಗಿ ಕೋವಿಯನ್ನು ಖರೀದಿಸಲು ಅನುಮತಿ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಆ ಕಡತ ಪೋಲೀಸ್ ವರಿಷ್ಠಾಧಿಕಾರಿಗಳ ಅವಗಾಹನೆಗೆ ಕಳುಹಿಸಿಕೊಡಲಾಗುತ್ತದೆ. ಸದರಿ ಕಡತವನ್ನು ಪೋಲೀಸ್ ಇಲಾಖೆ ಮತ್ತೆ ಹೆಚ್ಚುವರಿ ವಿಚಾರಣೆಗಾಗಿ ಸಂಬಂಧಪಟ್ಟ ಪೋಲೀಸ್ ಠಾಣೆಗಳಿಗೆ ಕಳುಹಿಸಿಕೊಡುತ್ತದೆ. ಇದರಿಂದ ಬೆಳೆಗಾರರು ಪೋಲೀಸ್ ಠಾಣೆಯಲ್ಲಿ ಕಡತವನ್ನು ಜೋಡಿಸಲು ತೊಂದರೆ ಅನುಭವಿಸುತ್ತಿದ್ದಾರೆ.
ಆದುದರಿಂದ ಒಂದು ಬಾರಿ ಕಡತವನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಿದ ನಂತರ ಅದೇ ಕಡತವನ್ನು ಪೋಲೀಸ್ ಇಲಾಖೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದರೆ ಬೆಳೆಗಾರರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಕಟ್ಟಿಮಂದಯ್ಯ ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಕಡತದಲ್ಲಿಯೇ ಕೋವಿ ಪರವಾನಿಗೆ ಮತ್ತು ವಿಕ್ರಯಿಸಲು ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು.
::: ದಲ್ಲಾಳಿಗಳಿಗೆ ಕಡಿವಾಣ ಹಾಕಿ :::
ಕೋವಿಗೆ ಸಂಬಂಧಿಸಿದ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ, ಆದರೆ ದಲ್ಲಾಳಿಗಳ ಮೂಲಕ ಹಣ ನೀಡಿದರೆ ಕಡತಗಳು ಶೀಘ್ರ ವಿಲೇವಾರಿಯಾಗುತ್ತದೆ ಎನ್ನುವ ಆರೋಪ ಕೇಳಿ ಬಂದಿದೆ. ಆದ್ದರಿಂದ ಜಿಲ್ಲಾಡಳಿತ ದಲ್ಲಾಳಿಗಳಿಗೆ ಕಡಿವಾಣ ಹಾಕಿ ಬೆಳೆಗಾರರಿಗೆ ಕೋವಿ ಹಕ್ಕನ್ನು ನ್ಯಾಯಯುತವಾಗಿ ನೀಡಬೇಕೆಂದು ಕಟ್ಟಿಮಂದಯ್ಯ ಇದೇ ಸಂದರ್ಭ ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ದಲ್ಲಾಳಿಗಳ ಹಾವಳಿ ಕಂಡು ಬಂದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಎಸ್.ಸತೀಶ್ ದೇವಯ್ಯ, ಸಹಕಾರ್ಯದರ್ಶಿ ಕಾಳಿಮಾಡ ಕೆ.ಬೆಳ್ಳಿಯಪ್ಪ, ಹೋಬಳಿ ಅಧ್ಯಕ್ಷ ಮಾಣೀರ ವಿಜಯನಂಜಪ್ಪ, ಸದಸ್ಯರುಗಳಾದ ಮಾಣೀರ ಮುತ್ತಪ್ಪ ಹಾಗೂ ಚೊಟ್ಟೆಯಂಡಮಾಡ ವಿಶ್ವನಾಥ್ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.