ಕೂರ್ಗ್ ವಿಲೇಜ್ ಮಳಿಗೆ ಪಾರದರ್ಶಕವಾಗಿ ಹಂಚಿಕೆ ಮಾಡಿ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

17/11/2020

ಮಡಿಕೇರಿ ನ.17 : ರಾಜಾಸೀಟು ಉದ್ಯಾನವನ ಬಳಿ ನಿರ್ಮಾಣವಾಗಿರುವ ಕೂರ್ಗ್ ವಿಲೇಜ್‍ನ ಮಳಿಗೆಗಳನ್ನು ಪಾರದರ್ಶಕವಾಗಿ ಹಂಚಿಕೆ ಮಾಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಕೂರ್ಗ್ ವಿಲೇಜ್‍ನಲ್ಲಿ ನಿರ್ಮಾಣವಾಗಿರುವ ಮಳಿಗೆ ಹಂಚಿಕೆ ಸಂಬಂಧ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಮಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಸ್ಥಳೀಯರಿಗೆ ಅವಕಾಶ ಮಾಡಬೇಕು. ಇಲಾಖೆಗಳ ಮೂಲಕ ಮಳಿಗೆ ಹಂಚಿಕೆ ಮಾಡಲಾಗುತ್ತಿದ್ದು, ಹೆಚ್ಚಿನ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಮಳಿಗೆಯನ್ನು ಒಂದು ವರ್ಷದವರೆಗೆ ನಿಗಧಿತ ಬಾಡಿಗೆ ದರದಲ್ಲಿ ನೀಡಲಾಗುತ್ತಿದ್ದು, ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಎಚ್.ಶಶಿಧರ್ ಅವರು ಕೂರ್ಗ್ ವಿಲೇಜ್‍ನಲ್ಲಿ ಒಟ್ಟು 15 ಮಳಿಗೆ ನಿರ್ಮಾಣ ಮಾಡಲಾಗಿದ್ದು, ತೋಟಗಾರಿಕೆ, ಪ್ರವಾಸೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದಿ, ತಾಲ್ಲೂಕು ಪಂಚಾಯತ್, ಸಮಗ್ರ ಗಿರಿಜನ ಯೋಜನೆ, ನಗರಸಭೆ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ಮತ್ತು ಕಾಫಿ ಮಂಡಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಇಲಾಖೆ ವ್ಯಾಪ್ತಿಯಲ್ಲಿನ ವಿವಿಧ ಸಂಘ ಸಂಸ್ಥೆಗಳು ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ತಾ.ಪಂ.ಇಒ ಲಕ್ಷ್ಮಿ, ಬಿಸಿಎಂ ಇಲಾಖೆಯ ಅಧಿಕಾರಿ ಲಿಂಗರಾಜು, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಜಿಲ್ಲಾ ವಿಕಲಚೇತನ ಅಧಿಕಾರಿ ಸಂಪತ್ ಕುಮಾರ್, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ನಗರಸಭೆಯ ಲೆಕ್ಕಾಧಿಕಾರಿ ತಾಹಿರ್, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ದೇವರಾಜು, ಐಟಿಡಿಪಿ ಇಲಾಖೆಯ ರಂಗನಾಥ್ ಅವರು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಷರತ್ತು ಹಾಗೂ ನಿಬಂಧನೆಗಳು ಇಂತಿವೆ: ಕೂರ್ಗ್ ವಿಲೇಜ್ ಮಳಿಗೆಯ ಪೂರ್ಣ ಉಸ್ತುವಾರಿಯನ್ನು ತೋಟಗಾರಿಕೆ ಇಲಾಖೆಯಿಂದ ರಾಜಾಸೀಟು ಅಭಿವೃದ್ಧಿ ಸಮಿತಿಯ ಅಧೀನದಲ್ಲಿ ನಿರ್ವಹಣೆ ಮಾಡಲಾಗುತ್ತದೆ. ಹಂಚಿಕೆ ಮಾಡಲಾಗಿರುವ ಇಲಾಖೆಗಳು, ಇಲಾಖೆಗೆ ಸಂಬಂಧಿಸಿದ ಉತ್ಪನ್ನಗಳನ್ನು ಇಲಾಖಾ ವತಿಯಿಂದ ನೇರವಾಗಿ ಅಥವಾ ಇಲಾಖಾ ಅಧೀನದಲ್ಲಿ ಬರುವ ನೋಂದಾಯಿತಿ ಸಂಘ, ಸಂಸ್ಥೆ, ಗುಂಪುಗಳಿಗೆ ಮಾತ್ರ ನೀಡಲಾಗುತ್ತದೆ. ಸಂಘ ಸಂಸ್ಥೆಗಳಿಗೆ ಮಳಿಗೆಗಳನ್ನು ಹಂಚಿಕೆ ಮಾಡುವ ಪೂರ್ಣ ಜವಾಬ್ದಾರಿಯು ಸಂಬಂಧಪಟ್ಟ ಇಲಾಖೆಗೆ ಒಳಪಟ್ಟಿರುತ್ತದೆ. ಹಂಚಿಕೆ ಮಾಡಲಾದ ಪೂರ್ಣ ವಿವರವನ್ನು ರಾಜಾಸೀಟು ಅಭಿವೃದ್ಧಿ ಸಮಿತಿಗೆ ನೀಡುವುದು.
ಮಳಿಗೆಯ ಹಂಚಿಕೆ ಅವಧಿಯು ಒಂದು ವರ್ಷದಾಗಿರುತ್ತದೆ. ಪ್ರತಿ ವರ್ಷ ನವೀಕರಣಗೊಳಿಸಬೇಕು. ಹಂಚಿಕೆ ಮಾಡಲಾದ ಮಳಿಗೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಪರಬಾರೆ ಮಾಡತಕ್ಕದಲ್ಲ. ಪರಬಾರೆ ಮಾಡಿರುವುದು ಕಂಡುಬಂದಲ್ಲಿ ಮಳಿಗೆಯ ಹಂಚಿಕೆಯನ್ನು ರದ್ದುಪಡಿಸಲಾಗುವುದು.
ಹಂಚಿಕೆ ಮಾಡಲಾದ ಮಳಿಗೆಗಳಲ್ಲಿ ಕಾಫಿ, ಟೀ, ತಂಪು ಪಾನೀಯ, ತಿಂಡಿ ತಿನಿಸು ಮಾರಾಟ ಮಾಡಬಾರದು. ಹಂಚಿಕೆ ಮಾಡಲಾದ ಮಳಿಗೆಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಉತ್ಪಾದಿಸಿದ ವಸ್ತುಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶವಿದೆ.
ನಿಗಧಿಪಡಿಸುವ ಬಾಡಿಗೆ ಮೊತ್ತವನ್ನು ಪ್ರತಿ ಮಾಹೆಯ ಮೊದಲ ವಾರದಲ್ಲಿ ಅಭಿವೃದ್ಧಿ ಸಮಿತಿಗೆ ಪಾವತಿಸತಕ್ಕದ್ದು, ಪ್ರತಿ ಮಾಹೆಯಲ್ಲಿ ಆಯಾಯ ಮಳಿಗೆದಾರರು ಉಪಯೋಗಿಸಲಾದ ವಿದ್ಯುತ್‍ಚ್ಛಕ್ತಿ ಬಿಲ್ಲನ್ನು ತಾವೇ ಪಾವತಿಸತಕ್ಕದ್ದು. ಪ್ರತಿ ಮಳಿಗೆದಾರರ ಶುಚಿತ್ವವನ್ನು ಕಾಪಾಡತಕ್ಕದ್ದು ಹಾಗೂ ಕಸ ವಿಲೇವಾರಿಯನ್ನು ತಾವೇ ಮಾಡತಕ್ಕದ್ದು. ರಾಜಾಸೀಟು ಅಭಿವೃದ್ಧಿ ಸಮಿತಿಯಿಂದ ಕಾಲಕಾಲಕ್ಕೆ ಹೊರಡಿಸುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.