ಟರ್ಫ್ ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ಶಾಸಕ ಅಪ್ಪಚ್ಚು ರಂಜನ್

17/11/2020

ಮಡಿಕೇರಿ ನ. 17 : ಸೋಮವಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಟರ್ಫ್ ಕಾಮಗಾರಿಯ ಬಗ್ಗೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರದಂದು ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ಶಾಸಕರು ಈಗಾಗಲೇ ಮೈದಾನಕ್ಕೆ ಡಾಂಬರು ಹಾಕಲಾಗಿದ್ದು, ಚರಂಡಿ ಸಮರ್ಪಕವಾಗಿಲ್ಲದಿರುವುದರಿಂದ ಅಲ್ಲಲ್ಲಿ ನೀರು ನಿಲ್ಲುತ್ತಿದೆ. ಭೂಮಿಯಲ್ಲಿ ನೀರಿನಂಶ ಇರುವುದರಿಂದ ಅಲ್ಲಲ್ಲಿ ಬೆಳ್ಳ ಬೆಳ್ಳಗಾಗಿದೆ. ಗುತ್ತಿಗೆ ಪಡೆದಿರುವ ಕಂಪೆನಿ ಗುಣಮಟ್ಟದ ಕಾಮಗಾರಿನಡೆಸಬೇಕು ಹಾಗೂ ಕ್ರೀಡಾ ಇಲಾಖೆಯ ಇಂಜಿನಿಯರ್ ಈ ಬಗ್ಗೆ ಗಮನಹರಿಸಬೇಕಿತ್ತೆಂದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಂಜನ್, ನಾನು ಕ್ರೀಡಾಸಚಿವನಾಗಿದ್ದ ಸಂದರ್ಭ ಈ ಕಾಮಗಾರಿ ಮಂಜೂರಾಗಿದ್ದು, ೪.೧೫ ಕೋಟಿವೆಚ್ಚದ ಕಾಮಗಾರಿಯನ್ನು ಹೈದರಾಬಾದ್ ಮೂಲದ ಕಂಪೆನಿ ನಿರ್ವಹಿಸುತ್ತಿದೆ ಎಂದರು.
ಈಗಾಗಲೇ ಕ್ರೀಡಾಇಲಾಖೆಯ ಇಂಜಿನಿಯರ್ ಜೊತೆ ಮಾತನಾಡಿದ್ದು, ಕಾಮಗಾರಿ ಪರಿಶೀಲಿಸುವಂತೆ ಸೂಚಿಸಿದ್ದೇನೆ. ಕಾಮಗಾರಿ ಮುಗಿದ ಬಳಿಕ ಈ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟ ಆಯೋಜಿಸುವುದಾಗಿ ತಿಳಿಸಿದರು.
ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಲು ಪದವಿಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ತಾ.ಪಂ.ಉಪಾಧ್ಯಕ್ಷೆ, ಕ್ರೀಡಾಂಗಣ ಕಾಮಗಾರಿ ಉಸ್ತುವಾರಿ ಸಮಿತಿ ಅಧ್ಯಕ್ಷ ಅಭಿಮನ್ಯುಕುಮಾರ್ ಹಾಗೂ ಮುಂತಾದವರು ಹಾಜರಿದ್ದರು.