ಹಾನಗಲ್ಲು ಗ್ರಾಮದಲ್ಲಿ ಅಕ್ರಮ ಬೀಟೆ ಮತ್ತು ತೇಗದ ಮರ ಸಾಗಾಟ ಯತ್ನ : ಐವರ ಬಂಧನ

ಮಡಿಕೇರಿ ನ.17 : ಹುದುಗೂರು ಮೀಸಲು ಅರಣ್ಯದಿಂದ ಬೀಟೆ ಮತ್ತು ತೇಗದ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಾಹನ ಸಹಿತ ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಹಾನಗಲ್ಲು ಗ್ರಾಮದ ತೋಟದಲ್ಲಿ ಬೀಟೆ ಮತ್ತು ತೇಗದ ಮರದ ತುಂಡುಗಳನ್ನು ದಾಸ್ತಾನಿರಿಸಿದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು, ಕೆಎ-55ಎಂ-7125 ಡಸ್ಟರ್ ವಾಹನ ಸಹಿತ ಆರೋಪಿಗಳಾದ ಹಾನಗಲ್ಲು ಗ್ರಾಮದ ಅಬ್ದುಲ್ ರೆಹಮಾನ್, ರಾಜು, ಬಿ.ಎಸ್.ರಮೇಶ, ಎಸ್.ಹೆಚ್ ಮೋಹನ್ ಕುಮಾರ್, ಹೆಚ್.ಆರ್.ಸಂಪತ್ ಎಂಬವರನ್ನು ಬಂಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಅಭೀಷೇಕ್, ಡಿ.ಸಿ.ಜಗನ್ನಾಥ ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.
ಸೋಮವಾರಪೇಟೆ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸುಮಂತ್, ಕೆ.ಸಿ. ನಾರಾಯಣ, ಅರಣ್ಯ ರಕ್ಷಕರುಗಳಾದ ಹೆಚ್.ಪಿ.ರಾಜಣ್ಣ, ಭರಮಪ್ಪ, ಈರಣ್ಣ ದಳವಾಯಿ, ಅರಣ್ಯವೀಕ್ಷಕರುಗಳಾದ ಪ್ರಸಾದ್ ಕುಮಾರ್, ಮೋಹನ್ ಕುಮಾರ್, ಸುಂದರ್, ದಿವಾಕರ, ವಾಹನ ಚಾಲಕ ಸಂತೋಷ್, ನಂದೀಪ್ ಪಾಲ್ಗೊಂಡಿದ್ದರು.