ನ.20ರಿಂದ ಉಪನ್ಯಾಸಕರ ನೇಮಕಾತಿ

November 18, 2020

ಬೆಂಗಳೂರು ನ.18 : ಈಗಾಗಲೇ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿಗೊಂಡಿರುವ ನೂತನ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನ.20ರಿಂದ ನೇಮಕಾತಿ ಆದೇಶಗಳನ್ನು ನೀಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದ್ದು, ನ.20ರಂದು ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನೇಮಕಾತಿ ಆದೇಶ ನೀಡಲಿದ್ದಾರೆ. ಕಾಲೇಜುಗಳು ಆರಂಭವಾದ ದಿನದಿಂದ ನೇಮಕಾತಿ ಆದೇಶ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ನೂತನ ಉಪನ್ಯಾಸಕರಿಗೆ ಇಲಾಖೆಯ ನಿಯಮಗಳು, ಆಡಳಿತ, ವೃಂದ ಮತ್ತು ನೇಮಕಾತಿ ನಿಯಮಗಳು, ಉಪನ್ಯಾಸಕರ ವೃತ್ತಿ ಧರ್ಮ, ವೃತ್ತಿ ಗೌರವ ಸೇರಿದಂತೆ ಪ್ರೇರಣಾದಾಯಕ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಗಳಲ್ಲಿ ಇಲ್ಲವೇ ವಿಭಾಗಗಳಲ್ಲಿ ನಡೆಸಲಾಗುವುದು ಎಂದು ಅವರು ವಿವರಿಸಿದ್ದಾರೆ.