ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ ಸೂದನ ಈರಪ್ಪ ಆಯ್ಕೆ

18/11/2020

ಮಡಿಕೇರಿ ನ.18 : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2020-25ರ ಅವಧಿಗೆ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರೈತಮಿತ್ರ ಕೂಟದ ಸೂದನ ಎಸ್.ಈರಪ್ಪ ಹಾಗೂ ಉಪಾಧ್ಯಕ್ಷರಾಗಿ ಕೆ.ಕೆ.ಗೋಪಾಲ ಆಯ್ಕೆಯಾಗಿದ್ದಾರೆ.
ಇಂದು ಸಂಘದ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಈರ್ವರು ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡು ಮಾತನಾಡಿದ ಸೂದನ ಈರಪ್ಪ ಅವರು ಎಲ್ಲರ ಸಹಕಾರದೊಂದಿಗೆ ಸಂಘವನ್ನು ಲಾಭದತ್ತ ಮುನ್ನಡೆಸುವುದಾಗಿ ತಿಳಿಸಿದರು. ಸದಸ್ಯರ ಪತ್ನಿ ಹಾಗೂ ಮಕ್ಕಳಿಗೆ ಸದಸ್ಯತನದ ಅವಕಾಶವನ್ನು ಸರಳಗೊಳಿಸಿ ಸಂಘದ ಸಂಬಂಧವನ್ನು ರೈತಾಪಿ ವರ್ಗದವರು ಕಡಿದುಕೊಳ್ಳದಂತೆ ನೋಡಿಕೊಳ್ಳುವುದು, ಬೆಳೆಗಾರರಿಂದ ಏಲಕ್ಕಿ ಮತ್ತು ಕರಿಮೆಣಸ್ಸನ್ನು ಸಂಗ್ರಹಿಸಿ ಅಗತ್ಯವಿದ್ದಲ್ಲಿ ಮುಂಗಡ ಹಣ ನೀಡಿ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ದೊರಕಿಸಿ ಕೊಡುವುದು, ಸಂಘದಲ್ಲಿ ಸದಸ್ಯರು ಮಾಡುವ ವ್ಯಾಪಾರ ವ್ಯವಹಾರಕ್ಕೆ “ರಿಬೇಟ್” ಪಾಸ್ ಪುಸ್ತಕ ನೀಡಿ ಯಾವುದೇ ಸದಸ್ಯರು ಮತದಾನದಿಂದ ವಂಚಿತರಾಗದಂತೆ ಮುತುವರ್ಜಿ ವಹಿಸುವುದು, ಸದಸ್ಯರ ಮರಣ ನಿಧಿ ವಂತಿಗೆಯನ್ನು ಈಗಿನ ಆರ್ಥಿಕ ವ್ಯವಸ್ಥೆಗೆ ಅನುಗುಣವಾಗಿ ಮಾರ್ಪಾಡುಗೊಳಿಸುವ ಗುರಿ ಹೊಂದಿರುವುದಾಗಿ ಅವರು ಹೇಳಿದರು.
ನಷ್ಟವನ್ನು ಎದುರಿಸುತ್ತಿರುವ ಸಂಘದ ಸೋಮವಾರಪೇಟೆ ಶಾಖೆಯನ್ನು ಲಾಭದತ್ತ ಕೊಂಡೊಯ್ಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ವಿರಾಜಪೇಟೆಯಲ್ಲೂ ಶಾಖೆಯೊಂದನ್ನು ತೆರೆಯಲಾಗುವುದು ಎಂದು ಈರಪ್ಪ ತಿಳಿಸಿದರು.
ಉಪಾಧ್ಯಕ್ಷ ಕೆ.ಕೆ.ಗೋಪಾಲ ಮಾತನಾಡಿ ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗದ ಸಹಕಾರದೊಂದಿಗೆ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ನಿರ್ದೇಶಕರುಗಳು ಹಾಗೂ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು. ಇತ್ತೀಚೆಗೆ ನಡೆದ ಸಂಘದ ಚುನಾವಣೆಯಲ್ಲಿ 17 ನಿರ್ದೇಶಕ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ರೈತಮಿತ್ರ ಕೂಟ ಗೆದ್ದುಕೊಂಡಿತ್ತು.