ಲೇಖಕ ಮತ್ತು ಕಲಾವಿದರ ಬಳಗದಿಂದ ಭಾವಗೀತೆ ಸ್ಪರ್ಧೆ

18/11/2020

ಮಡಿಕೇರಿ ನ.18 : ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಾಗೂ ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಕಲಾವಿದ ಅಬ್ದುಲ್ ಹಫೀಝ್ ಸಾಗರ್ ಅವರ ಜ್ಞಾಪಕಾರ್ಥವಾಗಿ ಸಾರ್ವಜನಿಕರಿಗೆ ಮುಕ್ತ ಭಾವಗೀತೆ ಸ್ಪರ್ಧೆ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು, ಸ್ಪರ್ಧೆಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೂ ಭಾಗವಹಿಸಲು ಅವಕಾಶವಿದೆ ಎಂದರು.
ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ನ.29ರ ಪೂರ್ವಾಹ್ನ 10.30ಕ್ಕೆ ನಡೆಯಲಿರುವ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ನ.25ರ ಒಳಗಾಗಿ ಸಂಸ್ಥೆಯ ಕಾರ್ಯದರ್ಶಿ ವಿಲ್ಫ್ರೆಡ್ ಕಾಸ್ತಾ ಅವರ ಮೊಬೈಲ್ ಸಂಖ್ಯೆ 9448773078 ಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುವುದು. ಅಲ್ಲದೆ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್ ಮಾತನಾಡಿ, ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ (603)ಪಡೆದ ವಿದ್ಯಾರ್ಥಿನಿ ಸೋಮವಾರಪೇಟೆ ತಾಲೂಕಿನ ಐಗೂರು ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಕೆ.ಆರ್.ಹರ್ಷಿತಾ ಅವರಿಗೆ ಟಿ.ಪಿ.ರಮೇಶ್ ದತ್ತಿ ನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ ಐದು ಮಂದಿ ಗಣ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ರಾಸ್ತಾ, ಕೋಶಾಧಿಕಾರಿ ಕಡ್ಲೆರ ತುಳಸಿ ಮೋಹನ್, ನಿರ್ದೇಶಕ ಎಸ್.ಐ.ಮುನೀರ್ ಅಹಮದ್ ಹಾಗೂ ಅಂಬೇಕಲ್ ನವೀನ್ ಉಪಸ್ಥಿತರಿದ್ದರು.