ತಲಕಾವೇರಿಕ್ ತಿಂಗಕೋರ್ ಮೊಟ್ಟ್ ಕಾರ್ಯಕ್ರಮ : ಪ್ರತಿ ತಿಂಗಳ ತಾ.17 ರಂದು ಕಾವೇರಿ ಕ್ಷೇತ್ರಕ್ಕೆ ಭೇಟಿ

18/11/2020

ಮಡಿಕೇರಿ ನ. 18 : ತಿಂಗಕೋರ್ ಮೊಟ್ಟ್ ತಲಕಾವೇರಿಕ್ ಎಂಬ ವಿಶಿಷ್ಟ ಆಲೋಚನೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಕಾವೇರಿ ಮಾತೆಯ ಭಕ್ತರು ಕಿರು ಸಂಕ್ರಮಣದ ಪ್ರಯುಕ್ತ ಕೊಡವ ಸಂಪ್ರದಾಯಿಕ ಉಡುಪಿನಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಭೇಟಿ ನೀಡಿ ವಿಶೆಷ ಪೂಜೆ ಸಲ್ಲಿಸಿದರು.
ಪ್ರತಿ ತಿಂಗಳ ತಾ.17ರಂದು ತಲಕಾವೇರಿಗೆ ಸಾಂಪ್ರದಾಯಿಕ ಉಡುಪಿನಲ್ಲಿಯೇ ಆಗಮಿಸಿ ಸೇವೆ ಸಲ್ಲಿಸುವುದಾಗಿ ಪ್ರಾರ್ಥನೆ ಮಾಡಿದ ಅನುಸಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತಲಕಾವೇರಿಗೆ ತೆರಳುವ ಮೊದಲು ಮೊದಲು ಕೊಡವರ ನರಮೇಧ ನಡೆದ ಸ್ಥಳ ದೇವಟಿಪರಂಬುವಿಗೆ ಭೇಟಿ ನೀಡಿ ಹಿರಿಯರಿಗೆ ನಮಿಸಿದರು. ನಂತರ ಭಾಗಮಂಡಲದಲ್ಲಿ ಪೂಜೆ ಸಲ್ಲಿಸಿ ತಲಕಾವೇರಿಗೆ ತೆರಳಿದರು. ತಲಕಾವೇರಿಯ ಮೂಲ ತಕ್ಕಮುಖ್ಯಸ್ಥರ ಕುಟುಂಬದವರಾದ ಮಂಡೀರ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾವೇರಿ ಭಕ್ತರಾದ ಮಲ್ಲಪನೆರ ವಿನು ಕಾವೇರಿಮಾತೆಗೆ ಅನಾಥ ಭಾವ ಬರಬಾರದು ಎಂಬ ನಿಟ್ಟಿನಲ್ಲಿ ಪ್ರತಿ ತಿಂಗಳ 17ರಂದು ತಲಕಾವೇರಿಗೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಹೆಚ್ಚಿನ ಸಂಖ್ಯೆಯ ಕೊಡವರು ಬರಬೇಕು, ಕಾವೇರಿ ಕೊಡವರ ಕುಲಮಾತೆಯಾಗಿದ್ದು, ನಾವು ಕೇವಲ ತುಲಾಸಂಕ್ರಮಣದಂದು ಮಾತ್ರ ನೆನಪಿಸಿಕೊಳ್ಳುತೇವೆ ಹಾಗಾಗಬಾರದು ಎಂದರು.
ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಮಾತನಾಡಿ ಕಾವೇರಿ ಕೊಡಗಿಗೆ ಆರಾಧ್ಯ ದೇವತೆಯಾದರೆ ಕೊಡವರಿಗೆ ಕುಲಮಾತೆ. ನಮ್ಮ ತಾಯಿಗೆ ಯಾವತ್ತು ನಾನು ಏಕಾಂಗಿ ಅನಿಸಬಾರದು ಈ ನಿಟ್ಟಿನಲ್ಲಿ ತಿಂಗಳಿಗೊಮ್ಮೆಯಾದರು ತಾಯಿಯ ಸೇವೆ ಮಾಡುವ. ಕೇವಲ ಪ್ರವಾಸಿಗರೇ ಅಧಿಕವಾಗಿದ್ದು, ಸ್ಥಳಿಯರು ಇಲ್ಲಿಗೆ ಹೆಚ್ಚಾಗಿ ಬಾರದೇ ಇರುವ ಕಾರಣ ಪ್ರವಾಸಿಗರದ್ದೇ ದಬ್ಬಾಳಿಕೆಯಾಗಿದೆ. ನಮಗೆ ಭಕ್ತರು ಬೇಕೇ ಹೊರತು ಪ್ರವಾಸಿಗರ ಅಗತ್ಯತೆ ಇಲ್ಲ. ಕ್ಷೇತ್ರದಲ್ಲಿ ಕಟ್ಟುನಿಟ್ಟಾದ ವಸ್ತ್ರ ಸಂಹಿತೆಯನ್ನು ಜಾರಿ ಮಾಡಬೇಕು ಹಾಗೂ ಸ್ಥಳಿಯರು ಪಿಂಡ ಪ್ರಧಾನ ಮಾಡಲು ಬಂದಾಗ ಅವರ ವಾಹನ ಗೇಟಿನೊಳಗೆ ಬಿಡಲು ಅವಕಾಶ ಮಾಡಿಕೊಡಬೇಕು ಎಂದರು.
ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಉಪಾಧ್ಯಕ್ಷ ಅಣ್ಣೀರ ಹರೀಶ್ ಮಾದಪ್ಪ, ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಜಿ.ಪಂ ಮಾಜಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ, ಅಪ್ಪಚ್ಚೀರ ಕಮಲ, ಚೊಟ್ಟೇಕ್’ಮಾಡ ಲತಾ ಪಾರ್ವತಿ, ಚೊಟ್ಟೆಪಂಡ ಭರತ್ ಉತ್ತಪ್ಪ ಹಾಗೂ ಮಂಡೀರ ಕುಟುಂಬದ ರೋಶನ್, ಸಚಿನ್, ಮಿಥುನ್, ಸುಭಾಷ್, ಧನು,ರಾಜಪ್ಪ, ಜಯ ದೇವಯ್ಯ, ವಿಘ್ನೇಶ್ ಚಂಗಪ್ಪ, ಸತೀಶ್, ತನೀಶ್, ಮನಿಶ್, ಸುಮನ್, ಸೌಮ್ಯ, ಜಶ್ಮಿ, ಶಾರದಾ, ಸಾಸ್ವಿತ್ ಸೋಮಣ್ಣ, ಮತ್ತಿತರರು ಹಾಜರಿದ್ದರು.