ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಮಡಿಕೇರಿಯಲ್ಲಿ ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ

November 18, 2020

ಮಡಿಕೇರಿ ನ. 18 : ಕೊಡಗು ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳ ಭರ್ತಿಗಾಗಿ ನಗರದ ಜನರಲ್ ತಿವ್ಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆಗಳು ನಡೆದವು. ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ 38 ಪುರುಷ ಹಾಗೂ 12 ಮಹಿಳಾ ಸಿವಿಲ್ ಪೊಲೀಸ್ ಹುದ್ದೆಗಳಿಗಾಗಿ ಕಳೆದ ತಿಂಗಳು ನಡೆಸಲಾದ ಪರೀಕ್ಷೆಯಲ್ಲಿ ರಾಜ್ಯದ ವಿವಿಧ ಭಾಗಗಳ 2500ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದರು. ಬಳಿಕ ತೇರ್ಗಡೆಯಾದ 250 ಮಂದಿ ಅಭ್ಯರ್ಥಿಗಳ ಪೈಕಿ ಇಂದು ನಡೆದ ದೈಹಿಕ ಮತ್ತು ಸಹಿಷ್ಣುತಾ ಪರೀಕ್ಷೆಗೆ ಒಟ್ಟು 212 ಮಂದಿ ಅಭ್ಯರ್ಥಿಗಳು ಭಾಗವಹಿಸಿದ್ದರು.
ಮೊದಲ ಹಚಿತದಲ್ಲಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ, ಬಳಿಕ ಎತ್ತರ ಹಾಗೂ ಎದೆಯ ಸುತ್ತಳತೆ, 1.6 ಕಿ.ಮೀ ಓಟ, ಲಾಂಗ್ ಜಂಪ್, ಶಾಟ್‍ಪುಟ್, ಹೈಜಂಪ್ ಮತ್ತಿತ್ತರ ದೈಹಿಕ ಹಾಗೂ ಸಹಿಷ್ಣುತಾ ಪರೀಕ್ಷೆಗಳನ್ನು ನಡೆಸಲಾಯಿತು. ಪ್ರತಿಯೊಂದು ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ನಡೆಸಲು ವಿಡೀಯೋ ಚಿತ್ರೀಕರಣ ಹಾಗೂ ಎಲ್ಲೆಡೆ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಅಂತಿಮವಾಗಿ 127 ಅಭ್ಯರ್ಥಿಗಳು ಮಾತ್ರವೇ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾದರು. ಕೊಡಗು ಜಿಲ್ಲೆಯಲ್ಲಿ ಖಾಲಿ ಇರುವ 50 ಸಿವಿಲ್ ಹುದ್ದೆಗಳಿಗೆ ಇದೀಗ ಆಯ್ಕೆಯಾಗಿರುವ 127 ಮಂದಿ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ ಮೆರಿಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೊಡಗು ಪೊಲೀಸ್ ನೇಮಕಾತಿ ಸಮಿತಿ ಅಧ್ಯಕ್ಷರಾದ ಕ್ಷಮಾ ಮಿಶ್ರ ಆಯ್ಕೆ ಪ್ರಕ್ರಿಯೆ ಸಂದರ್ಭ ಹಾಜರಿದ್ದು ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಡಿವೈಎಸ್‍ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕರಾದ ಮೇದಪ್ಪ, ದಿವಾಕರ್, ಡಿಸಿಆರ್‍ಬಿಯ ಜಯರಾಂ ಹಾಗೂ ಅಧಿಕಾರಿ ವರ್ಗ ಮತ್ತು ಜಿಲ್ಲಾ ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದು, ವಿವಿಧ ಪರೀಕ್ಷೆಗಳ ಮೇಲ್ವಿಚಾರಣೆ ನಡೆಸಿದರು. ಬೆಳಗೆ 7 ಗಂಟೆಯಿಂದ ಪೊಲೀಸ್ ನೇಮಕಾತಿ ಪ್ರಕ್ರಿಯೆ ಆರಂಭವಾದ ಹಿನ್ನಲೆಯಲ್ಲಿ ಮೈದಾನದೊಳಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

error: Content is protected !!