ಗ್ರಾ.ಪಂ ಚುನಾವಣೆ : ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

18/11/2020

ಮಡಿಕೇರಿ ನ.18 : ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣಾ ದಿನಾಂಕವು ಯಾವುದೇ ಸಂದರ್ಭದಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದು, ಆ ದಿಸೆಯಲ್ಲಿ ಚುನಾವಣೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗ್ರಾ.ಪಂ.ಸಾರ್ವತ್ರಿಕ ಚುನಾವಣೆ ತಯಾರಿ ಬಗ್ಗೆ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾ.ಪಂ.ಚುನಾವಣೆ ಸಿದ್ಧತೆ ಸಂಬಂಧ ಜಿಲ್ಲೆಯಲ್ಲಿ 562 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ನವೆಂಬರ್, 25 ರೊಳಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದೃಢೀಕರಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ 598, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ 23, ಗ್ರಾ.ಪಂ. ವ್ಯಾಪ್ತಿಯ 13, ಪದವಿ ಪೂರ್ವ ಶಿಕ್ಷಣ ಇಲಾಖೆಯ 10, ಕಂದಾಯ ಇಲಾಖೆಯ 1, ಅರಣ್ಯ ಇಲಾಖೆಯ 3, ಪಶುಪಾಲನಾ ಇಲಾಖೆಯ 1, ಐಟಿಡಿಪಿ ಇಲಾಖೆ ವ್ಯಾಪ್ತಿಯ 2, ಇತರೆ ಕಟ್ಟಡಗಳು ಸೇರಿದಂತೆ ಆಯಾಯ ಇಲಾಖೆ ವ್ಯಾಪ್ತಿಯ ಮತಗಟ್ಟೆಗಳ ಸುಸ್ಥಿತಿ ಬಗ್ಗೆ ಖುದ್ದು ಪರಿಶೀಲಿಸಿ ವರದಿ ನೀಡಬೇಕು. ಸಣ್ಣ ಪುಟ್ಟ ರಿಪೇರಿ ಇದ್ದಲ್ಲಿ ಸರಿಪಡಿಸಲಾಗುವುದು. ಈ ಸಂಬಂಧ ತಹಶೀಲ್ದಾರರು ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯ ಪ್ರತೀ ಗ್ರಾ.ಪಂ.ಗಳಿಗೆ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಬೇಕು. ಚುನಾವಣಾಧಿಕಾರಿಗಳಿಗೆ ಗ್ರಾ.ಪಂ.ಕಚೇರಿಯಲ್ಲಿ ಸ್ಥಳಾವಕಾಶ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ನವೆಂಬರ್, 21 ರಂದು ಮಡಿಕೇರಿಯಲ್ಲಿ, 23 ರಂದು ಸೋಮವಾರಪೇಟೆ ಮತ್ತು 24 ರಂದು ವಿರಾಜಪೇಟೆಯಲ್ಲಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಮಾಸ್ಟರ್ ಟ್ರೈನರ್ ಅವರಿಂದ ತರಬೇತಿ ನಡೆಯಲಿದ್ದು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ತರಬೇತಿ ಬಗ್ಗೆ ಸೂಚನಾ ಪತ್ರ ಕಳುಹಿಸುವಂತೆ ತಹಶೀಲ್ದಾರರಿಗೆ ನಿರ್ದೇಶನ ನೀಡಿದರು.
‘ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಡಿಸೆಂಬರ್, 17 ರವರೆಗೆ ಮತದಾರರ ಪಟ್ಟಿ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಮತದಾರರ ಪಟ್ಟಿ ಬಗ್ಗೆ ಹತ್ತಿರದ ಗ್ರಾ.ಪಂ. ಅಥವಾ ತಹಶೀಲ್ದಾರರ ಕಚೇರಿಯಲ್ಲಿ ಪರಿಶೀಲಿಸಬಹುದಾಗಿದೆ. ಹಾಗೆಯೇ ನವೆಂಬರ್, 22, 29, ಡಿಸೆಂಬರ್, 06 ಮತ್ತು 13 ರಂದು ವಿಶೇಷ ಅಭಿಯಾನ ನಡೆಯಲಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.’
ಸೂಕ್ಷ್ಮ, ಅತಿ ಸೂಕ್ಷ್ಮ ಮತ್ತು ವಲ್ನರಬಲ್ ಮತಗಟ್ಟೆಗಳನ್ನು ಪೊಲೀಸ್ ಮತ್ತು ಕಂದಾಯ ಇಲಾಖೆಯವರು ಗುರುತಿಸಿ ವರದಿ ನೀಡಬೇಕು. ಕೋವಿಡ್ ಹಿನ್ನೆಲೆ ಚುನಾವಣಾ ಆಯೋಗದ ನಿರ್ದೇಶನವನ್ನು ಪಾಲಿಸಬೇಕು. ಚುನಾವಣೆಗೆ ಅವಶ್ಯವಿರುವ ಮತಪೆಟ್ಟಿಗೆ ಹಾಗೂ ಸಾಮಗ್ರಿಗಳನ್ನು ಸಿದ್ದಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ, ನೇಮಕ ಮತ್ತು ತರಬೇತಿಗೆ ಅಗತ್ಯ ಕ್ರಮವಹಿಸುವುದು. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಮತ ಎಣಿಕೆ ಕೇಂದ್ರ ಹಾಗೂ ಮತ ಪತ್ರಗಳ ಮುದ್ರಣಕ್ಕೆ ಮುದ್ರಣಾಲಯ ಗುರುತಿಸುವುದು. ಚುನಾವಣೆಗೆ ಅಗತ್ಯವಿರುವ ವಾಹನ ಕಾಯ್ದಿರಿಸಿಕೊಳ್ಳುವುದು. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಚುನಾವಣೆಗೆ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳುವುದು, ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆ ಪಾಲಿಸುವುದು ಮತ್ತಿತರ ಬಗ್ಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಅವರು ಚುನಾವಣೆ ಸಂಬಂಧ ಹಲವು ಮಾಹಿತಿ ನೀಡಿದರು.
ತಾ.ಪಂ.ಇಒ ಲಕ್ಷ್ಮಿ, ತಹಶೀಲ್ದಾರ್ ಮಹೇಶ್, ನಂದೀಶ್, ಚುನಾವಣಾ ತಹಶೀಲ್ದಾರ್ ಕುಸುಮ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹಾಲಿಂಗಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮದನ್ ಮೋಹನ್, ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಾಂಡು, ಶ್ರೀಶೈಲ ಬೀಳಗಿ, ಗುರುರಾಜ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಅರುಂಧತಿ, ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಮ್, ಸುರೇಶ್, ಶಿರಸ್ತೆದಾರ್ ಪ್ರಕಾಶ್, ಅನಿಲ್ ಕುಮಾರ್ ಇತರರು ಇದ್ದರು.