ಹಾರಂಗಿ ನದಿ ಪಾತ್ರದಲ್ಲಿ ತಡೆಗೋಡೆ ನಿರ್ಮಾಣ : ಸರಕಾರಕ್ಕೆ ಪ್ರಸ್ತಾವನೆ

18/11/2020

ಮಡಿಕೇರಿ ನ.18 : ಹಾರಂಗಿ ಜಲಾಶಯ ಪೂರ್ಣವಾಗಿ ಭರ್ತಿಯಾದ ಸಂದರ್ಭದಲ್ಲಿ ಹೆಚ್ಚುವರಿಯಾದ ನೀರನ್ನು ಹಾರಂಗಿ ನದಿಗೆ ಹರಿಸುವ ಸಂದರ್ಭ ಹಾರಂಗಿ ನದಿ ಪಾತ್ರದ ಹಲವು ಪ್ರದೇಶಗಳಲ್ಲಿ ನೀರು ಭಾರೀ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಅಲ್ಲಲ್ಲಿ ತಡೆಗೋಡೆ ನಿರ್ಮಿಸಲು ಚಿಂತನೆ ನಡೆಸಲಾಗಿದೆ
ಹಾರಂಗಿ ನದಿಯ ನೀರು ನುಗ್ಗಿ ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಉಂಟಾಗುವ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು, ನದಿ ನೀರು ನುಗ್ಗಿ ಹಾನಿಯಾಗುವ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತದ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಇದೀಗ 50 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿರುವುದಾಗಿ ಹೇಳಲಾಗಿದೆ.
ಕಳೆದ ಎರಡೂ ವರ್ಷಗಳಿಂದ ಹಾರಂಗಿಯ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕೂಡಿಗೆಯ ಪ್ರಮುಖ ವಿದ್ಯಾಸಂಸ್ಥೆಯಾದ ಕೊಡಗು ಸೈನಿಕ ಶಾಲೆ ಆವರಣದವರೆಗೆ ನೀರು ನುಗ್ಗಿ ಹಾನಿಯಾಗಿತ್ತು. ಅಲ್ಲದೆ ಹಾರಂಗಿಯ ನದಿ ದಂಡೆಯ ಪಕ್ಕದ ರೇಷ್ಮೆ ಇಲಾಖೆಯ ಕೃಷಿ ಕ್ಷೇತ್ರದ ಆವರಣದಲ್ಲಿ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಯ ಆವರಣ ಹಾಗೂ ಕೊಠಡಿಗಳಿಗೆ ನೀರು ನುಗ್ಗಿ ಭಾರೀ ನಷ್ಟ ಉಂಟಾಗಿತ್ತು.
ಈ ಸಂಬಂಧ ಸೈನಿಕ ಶಾಲೆಯವರು ಕೇಂದ್ರ ಸರಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಮತ್ತು ಕ್ಷೇತ್ರದ ಶಾಸಕರಿಗೆ ಪತ್ರ ಬರೆದು ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದರು. ಅದರಂತೆ ಹಾರಂಗಿ ನದಿ ದಂಡೆಯ ಕೆಲವು ತಗ್ಗು ಪ್ರದೇಶಗಳು, ಕೂಡಿಗೆಯ ಸೈನಿಕ ಶಾಲೆಯ ಹತ್ತಿರ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಳಿ ತಡೆಗೊಡೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಅದರಂತೆÀ ಸರಕಾರಕ್ಕೆ 50 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಪ್ಪಚ್ಚುರಂಜನ್ ತಿಳಿಸಿದ್ದಾರೆ.
ಈ ಸಂದರ್ಭ ಕಾವೇರಿ ನೀರಾವರಿ ನಿಗಮದ ಹಾರಂಗಿ ವೃತ್ತದ ಅಧೀಕ್ಷಕ ಇಂಜಿನಿಯರ್ ಚನ್ನಕೇಶವ, ಕಾರ್ಯಪಾಲಕ ಅಭಿಯಂತರ ರಾಜೇಗೌಡ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ, ಇಂಜಿನಿಯರ್ ನಾಗರಾಜ್ ಹಾಜರಿದ್ದರು.