ಆರೋಗ್ಯ ಸಚಿವರಿಗೆ ಮೊದಲ ಲಸಿಕೆ

November 19, 2020

ನವದೆಹಲಿ ನ.19 : ಕೊರೋನಾ ವೈರಸ್ ಗೆ ಲಸಿಕೆ ಕೋವಾಕ್ಸಿನ್ ಕ್ಲಿನಿಕಲ್ ಟ್ರಯಲ್ ನ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯಲಿದ್ದು, ಆರೋಗ್ಯ ಸಚಿವ ಅನಿಲ್ ವಿಜ್ ಅವರು ಸ್ವಯಂಪ್ರೇರಿತವಾಗಿ ಮೊದಲ ಲಸಿಕೆ ಪಡೆಯಲು ಮುಂದಾಗಿದ್ದಾರೆ.
ಐಸಿಎಂಆರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆಯ ಸಹಯೋಗದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಟ್ರಯಲ್ ನಲ್ಲಿದ್ದು ಸುರಕ್ಷಾ ಹಾಗೂ ಪರಿಣಾಮಕಾರಿತ್ವದ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ.
ನವೆಂಬರ್ 20ರಿಂದ ಮೂರನೇ ಹಂತದ ಪ್ರಯೋಗ ಆರಂಭವಾಗುತ್ತಿದ್ದು, ಅನಿಲ್ ವಿಜ್ ಅವರು ಸ್ವಯಂಸೇವಕರಾಗಿ ಮೊದಲ ಲಸಿಕೆಯನ್ನು ಪಡೆಯಲಿದ್ದಾರೆ.
ಈ ಕುರಿತು ಸ್ವತಃ ಸಚಿವ ಅನಿಲ್ ಟ್ವೀಟ್ ಮಾಡಿದ್ದು, ಮೊದಲ ಲಸಿಕೆ ನನಗೇ ನೀಡುವಂತೆ ಕಂಪನಿ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಹರಿಯಾಣದ ರೋಹ್ಟಕ್‍ನ ಪಂಡಿತ್ ಭಗವತ್ ದಯಾಳ್ ಶರ್ಮಾ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಫರಿದಾಬಾದ್‍ನ ಇಎಸ್‍ಐಸಿ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮೂರನೇ ಹಂತದ ಪ್ರಯೋಗ ನಡೆಯಲಿದೆ ಎಂದು ಭಾರತ್ ಬಯೋಟೆಕ್ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!