ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ

November 19, 2020

ಬೆಂಗಳೂರು ನ.19 : ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ಸಂಪುಟ ಸಭೆಯಲ್ಲಿ ಅನೌಪಚಾರಿಕ ಒಪ್ಪಿಗೆ ನೀಡಲಾಗಿದೆ.
ನ.18 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ ಸಂಬಂಧ ಚರ್ಚೆ ನಡೆದಿದ್ದು, ಅನೌಪಚಾರಿಕ ಒಪ್ಪಿಗೆ ನೀಡಲಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ ಅಧಿಕೃತ ಘೋಷಣೆಯಾಗಲಿದೆ.
ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಪ್ರತ್ಯೇಕ ಜಿಲ್ಲೆಗಾಗಿ ಬೇಡಿಕೆ ಇಟ್ಟಿದ್ದರು. ಬಳ್ಳಾರಿ ಜಿಲ್ಲೆ ವಿಭಜಿಸಿ, ಹೊಸಪೇಟೆ ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ರಚಿಸಬೇಕೆಂಬ ಹತ್ತಾರು ವರ್ಷಗಳ ಬೇಡಿಕೆ ಇದಾಗಿದ್ದು, ಈಗ ವಿಜಯನಗರ ಜಿಲ್ಲೆ ರಚನೆ ಸಾಧ್ಯತೆ ಹೆಚ್ಚಾಗಿರುವ ಬೆನ್ನಲ್ಲೇ ಅಸಮಾಧಾನವೂ ಭುಗಿಲೆದ್ದಿದೆ.
ವಿಜಯನಗರ ಜಿಲ್ಲೆ ರಚನೆ ಮಾಡಿದ್ದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ ಸಚಿವ ಆನಂದ್ ಸಿಂಗ್, ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಬಹುದಿನದ ಬೇಡಿಕೆ. ಹಿಂದೂ ಸಾಮ್ರಾಜ್ಯವಾಗಿದ್ದ ವಿಜಯನಗರ ಕ್ಷೇತ್ರವನ್ನು ಮಾದರಿ ಜಿಲ್ಲೆಯಾಗಿ ಮಾಡಬೇಕೆಂಬ ತೀರ್ಮಾನದಿಂದ ಐತಿಹಾಸಿಕ ತೀರ್ಮಾನ ಮಾಡಿದಂತಾಗಿದೆ. ಎಲ್ಲರನ್ನೂ ವಿಶ್ವಾಸಕ್ಜೆ ತೆಗೆದುಕೊಂಡಿದ್ದೇವೆ. ಬಳ್ಳಾರಿ ಪಶ್ಚಿಮ ಭಾಗದ ತಾಲೂಕುಗಳ ಬೇಡಿಕೆ ಈಡೇರಿದೆ. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ.ಅಂತೆಯೇ ಬೇಡಿಕೆ ಈಡೇರಿಕೆಗೆ ಒಪ್ಪಿಗೆ ನೀಡಿದ ಮುಖ್ಯಮಂತ್ರಿಗಳಿಗೂ ಅಭಿನಂದನೆ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.

error: Content is protected !!