ಬೆಂಗಳೂರಿನಲ್ಲಿ ಚಳಿಗಾಲದ ಅಧಿವೇಶನ

19/11/2020

ಬೆಂಗಳೂರು ನ.19 : ವಿಧಾನ ಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 7 ರಿಂದ 15ರವರೆಗೆ ಬೆಂಗಳೂರಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಆರಂಭದಲ್ಲಿ ಬೆಳಗಾವಿಯಲ್ಲಿ ನಡೆಸುವ ಚಿಂತನೆಯಿತ್ತು ಆದರೆ ಆರ್ಥಿಕ ಹಾಗೂ ಇತರೆ ಸಮಸ್ಯೆಗಳ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಸ್ಪಷ್ಟೀಕರಣ ನೀಡಿದ ಅವರು, ಅದು ಮರಾಠ ಅಭಿವೃದ್ಧಿ ಪ್ರಾಧಿಕಾರವಲ್ಲ, ಸಮುದಾಯ ಅಭಿವೃದ್ದಿ ನಿಗಮವಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಹೆಸರು ಬದಲಾವಣೆಗೆ ನಿರ್ಧರಿಸಿದ್ದು, ಇನ್ನು ಮುಂದೆ “ಮರಾಠ ಸಮುದಾಯ ನಿಗಮ” ಎಂದು ಬದಲಾವಣೆ ಯಾಗಲಿದೆ. ಮರಾಠ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಾಧಿಕಾರ ಮಾಡಬೇಕಾದರೆ ಕಾನೂನು ಮಾಡಬೇಕು.ಆದರೆ ನಿಗಮಕ್ಕೆ ಸರ್ಕಾರವೇ ನಿರ್ಧಾರ ಕೈಗೊಳ್ಳಬಹುದು. ಹಣ ಎಷ್ಟು ನಿಗದಿ ಮಾಡಬೇಕು ಎಂಬುದು ಇನ್ನೂ ಚರ್ಚೆಯಾಗಿಲ್ಲ. ಒಂದು ಸಮುದಾಯದ ಅಭಿವೃದ್ಧಿ ವಿಷಯದಲ್ಲಿ ಯಾಕೆ ವಿರೋಧ ಮಾಡುತ್ತಿದ್ದಾರೋ ಗೊತ್ತಿಲ್ಲ. ಆದರೂ ಅಭಿವೃದ್ಧಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.