ಕುಶಾಲನಗರ , ಸೋಮವಾರಪೇಟೆ ಮತ್ತು ವಿರಾಜಪೇಟೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಅಸಿಂಧು : ಹೈಕೋರ್ಟ್ ಆದೇಶ

19/11/2020

ಮಡಿಕೇರಿ ನ.19 : ಕೊಡಗು ಜಿಲ್ಲೆಯ ಮೂರು ಪಟ್ಟಣ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿ ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದೆ.
ಇದರಿಂದಾಗಿ ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ವೀರಾಜಪೇಟೆ ಪಟ್ಟಣ ಪಂಚಾಯಿತಿಗಳಿಗೆ ಇತ್ತೀಚೆಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮತ್ತು ಆಯ್ಕೆ ಅಸಿಂಧುವಾಗಿದೆ.
ಈ ಮೂರು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿ ಸಮರ್ಪಕವಾಗಿ ನಡೆದಿಲ್ಲ ಎಂದು ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಎ. ಎಸ್. ಪೊನ್ನಣ್ಣ ಹಾಗೂ ಎಂ.ಎಸ್ ಚಂದ್ರಮೌಳಿ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯದ ಏಕಸದಸ್ಯ ಪೀಠ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಅಸಿಂಧು ಎಂದು ತೀರ್ಪು ನೀಡಿದೆ. ಅಲ್ಲದೆ ಈ ಬಗ್ಗೆ ತಕರಾರು ಸಲ್ಲಿಸಲು ರಾಜ್ಯ ಸರಕಾರಕ್ಕೆ ಹತ್ತು ದಿನದ ಕಾಲಾವಕಾಶವನ್ನು ಕೂಡ ನ್ಯಾಯಾಲಯ ನೀಡಿದೆ.
ಅನಿರೀಕ್ಷಿತವಾದ ಆದೇಶದಿಂದಾಗಿ ಮೂರು ಪಟ್ಟಣ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಕೈಗೆ ಬಂದ ಅಧಿಕಾರ ಇಲ್ಲದಂತಾಗಿದೆ. ಮೂರು ಪಂಚಾಯಿತಿಗಳಲ್ಲಿಯೂ ಅಧಿಕಾರವನ್ನು ಬಿಜೆಪಿ ತನ್ನದಾಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
::: ಕುಶಾಲನಗರ ಪ.ಪಂ :::
ಇದೇ ನವೆಂಬರ್ 3ರಂದು ನಡೆದಿದ್ದ ಚುನಾವಣೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾಗಿ ಬಿಜೆಪಿಯ ಜಯವರ್ಧನ್(ಕೇಶವ್) ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‍ನ ಸುರಯ್ಯಭಾನು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ(ಎ) ಮಹಿಳೆಗೆ ಮೀಸಲಾಗಿತ್ತು. ಈ ಪಂಚಾಯತ್‍ನ ಒಟ್ಟು 13 ಮಂದಿ ಚುನಾಯಿತ ಸದಸ್ಯರ ಪೈಕಿ ಬಿಜೆಪಿ 6, ಕಾಂಗ್ರೆಸ್ 3 ಹಾಗೂ ಜೆಡಿಎಸ್ 4 ಸದಸ್ಯರನ್ನು ಹೊಂದಿದ್ದು, ಇತ್ತೀಚೆಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‍ನ ಮೂರು ಮಂದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದರೊಂದಿಗೆ ಉಪಾಧ್ಯಕ್ಷ ಸ್ಥಾನವನ್ನು ಜೆಡಿಎಸ್ ತೆಕ್ಕೆಗೆ ಹಾಕಿಕೊಂಡಿದ್ದರು. ಈ ಸಂದರ್ಭ ಜೆಡಿಎಸ್‍ನ ವಿ.ಎಸ್.ಆನಂದ ಕುಮಾರ್ ಮಾತ್ರವೇ ತಟಸ್ಥವಾಗಿ ಉಳಿದರು.
::: ವೀರಾಜಪೇಟೆ ಪ.ಪಂ :::
ವೀರಾಜಪೇಟೆ ಪಟ್ಟಣ ಪಂಚಾಯತ್‍ನ ಅಧ್ಯಕ್ಷರಾಗಿ ಬಿಜೆಪಿಯ ಟಿ.ಆರ್.ಸುಶ್ಮಿತಾ ಹಾಗೂ ಉಪಾಧ್ಯಕ್ಷರಾಗಿ ಲಾಟರಿ ಮೂಲಕ ಹರ್ಷವರ್ಧನ್ ಆಯ್ಕೆಯಾಗಿದ್ದರು. ಈ ಪಂಚಾಯಿತಿಯ ಒಟ್ಟು 18 ಚುನಾಯಿತ ಸದಸ್ಯರ ಪೈಕಿ ಬಿಜೆಪಿ 8, ಕಾಂಗ್ರೆಸ್ 6, ಜೆಡಿಎಸ್ 1 ಹಾಗೂ ಪಕ್ಷೇತರ ಮೂರು ಮಂದಿ ಸದಸ್ಯರಾಗಿದ್ದರು. ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಶ್ಮಿತಾ ಮಾತ್ರ ಅರ್ಹರಾಗಿದ್ದರಿಂದ ಬಿಜೆಪಿಯ 8 ಹಾಗೂ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಂಸದ ಪ್ರತಾಪ್‍ಸಿಂಹ ಅವರ ಎರಡು ಮತಗಳ ಸಹಕಾರದಿಂದ 10 ಮತಗಳನ್ನು ಪಡೆದಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಅಗಸ್ಟಿನ್ ಹಾಗೂ ಹರ್ಷವರ್ಧನ್ ಅವರುಗಳು ತಲಾ 10 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು. ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರು ಲಾಟರಿ ಮೂಲಕ ವಿಜೇತರನ್ನು ಆಯ್ಕೆ ಮಾಡುವ ಸಂದರ್ಭ ಹರ್ಷವರ್ಧನ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರ ಮೈತ್ರಿ ಕೂಟ ಮುಖಭಂಗ ಅನುಭವಿಸುವಂತಾಗಿತ್ತು.
::: ಸೋಮವಾರಪೇಟೆ ಪ.ಪಂ :::
ಸೋಮವಾರಪೇಟೆ ಪಟ್ಟಣ ಪಂಚಾಯತ್‍ನಲ್ಲೂ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ನಳಿನಿ ಗಣೇಶ್ ಮೀಸಲಾತಿಯಡಿ ಆಯ್ಕೆಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‍ನ ಬಿ.ಸಂಜೀವ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.