ಕೊಡಗು ಕಾಂಗ್ರೆಸ್ನಿಂದ ಇಂದಿರಾಗಾಂಧಿ ಜನ್ಮ ದಿನಾಚರಣೆ

ಮಡಿಕೇರಿ ನ.19 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 103ನೇ ಜನ್ಮ ದಿನವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ದೇಶ ಕಂಡ ದಿಟ್ಟ ಮಹಿಳೆ ಇಂದಿರಾಗಾಂಧಿ ಅವರು ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ ಎಂದರು.
ಬಾಲ್ಯದಿಂದಲೇ ಸಮಾಜ ಸೇವೆ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಯಶಸ್ಸನ್ನು ಸಾಧಿಸುವ ಮೂಲಕ ದೇಶವನ್ನು ಆಳುವ ಪ್ರಧಾನಿ ಪಟ್ಟಕ್ಕೇರಿದರು. ಇಂದಿನ ಮಹಿಳಾ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿರುವ ಇಂದಿರಾ ಅವರ ದೇಶಸೇವೆ ಇಂದಿಗೂ ವಿಸ್ಮರಣೀಯವೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್ ಸ್ವಾಗತಿಸಿ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಹೊಸೂರು ಸೂರಜ್ ವಂದಿಸಿದರು.
ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್, ಡಿಸಿಸಿ ಪದಾಧಿಕಾರಿಗಳು, ಸದಸ್ಯರು, ಬ್ಲಾಕ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಚುನಾಯಿತ ಜನಪ್ರತಿನಿಧಿಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

