ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೈಕ್ರೋ ಎಟಿಎಂ ಯಂತ್ರ ಹಸ್ತಾಂತರ

19/11/2020

ಮಡಿಕೇರಿ ನ.19 : ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಆಧುನಿಕ ಬ್ಯಾಂಕಿಂಗ್ ವಿದ್ಯಮಾನಗಳಲ್ಲಿ ಒಂದಾದ ಮೈಕ್ರೋ ಎಟಿಎಂ ಯಂತ್ರವನ್ನು ಜಿಲ್ಲೆಗೆ ಆಗಮಿಸಿದ ನಬಾರ್ಡ್ ಸಂಸ್ಥೆಯ ಕರ್ನಾಟಕ ಸ್ಥಾನೀಯ ಮುಖ್ಯ ಪ್ರಬಂಧಕರಾದ ನೀರಜ್‍ಕುಮಾರ್ ವರ್ಮ ಅವರು ಪ್ರಾಯೋಗಿಕವಾಗಿ ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಸಂಘದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರು ಆಗಿರುವ ಕಿಮ್ಮುಡಿರ ಜಗದೀಶ್ ಅವರಿಗೆ ಹಸ್ತಾಂತರಿಸಿದರು.
ಜಿಲ್ಲೆಯ ರೈತರಿಗೆ ಮುಂಬರುವ ವರ್ಷಗಳಲ್ಲಿ ನೀಡುವ ಕೆಸಿಸಿ ಸಾಲವನ್ನು ಕಡ್ಡಾಯವಾಗಿ ಕೆಸಿಸಿ ರೂಪೇ ಕಾರ್ಡು ಮುಖಾಂತರ ನೀಡುವ ಸಂದರ್ಭ ಈ ಮೈಕ್ರೋ ಎಟಿಎಂಗಳು ಜಿಲ್ಲೆಯ ಪ್ಯಾಕ್ಸ್‍ಗಳ ಹಂತದಲ್ಲಿ ಅಳವಡಿಕೆಯಾಗುವುದರಿಂದ ಗ್ರಾಮೀಣ ಭಾಗದ ರೈತರಿಗೆ ತಮ್ಮ ಪ್ರಾಥಮಿಕ ಸಹಕಾರ ಸಂಘದ ಹಂತದಲ್ಲಿ, ರೈತರು ಹೊಂದಿರುವ ರೂಪೇ ಕೆಸಿಸಿ ಕಾರ್ಡುಗಳ ಮುಖಾಂತರ ತಮ್ಮ ವ್ಯವಹಾರವನ್ನು ನಡೆಸಲು ಪ್ರಯೋಜನಕಾರಿಯಾಗಲಿದೆ.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು, ನಬಾರ್ಡ್ ಪ್ರಾಯೋಜಕತ್ವದೊಂದಿಗೆ, ಜಿಲ್ಲೆಯ 30 ಸಹಕಾರ ಸಂಘಗಳಿಗೆ ಮೈಕ್ರೋ ಎಟಿಎಂಗಳ ಅಳವಡಿಕೆ ಪ್ರಕ್ರಿಯೆಯನ್ನು ಕೈಗೊಂಡಿದ್ದು, ಮದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೈಕ್ರೊ ಎ.ಟಿ.ಎಂ. ವಿತರಣಾ ಸಮಾರಂಭದಲ್ಲಿ ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ಪಿ.ವಿ. ಶ್ರೀನಿವಾಸ್, ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಿಇಒ ಬಿ.ಕೆ.ಸಲೀಂ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಕೆ.ಕೆ. ಪೂವಯ್ಯ ಅವರು ಹಾಜರಿದ್ದರು.