ನ.21 ರಿಂದ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಪಾಕ್ಷಿಕ ಆಚರಣೆ

19/11/2020

ಮಡಿಕೇರಿ ನ.19 : ಪುರುಷರಿಗೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ವಿಧಾನ (ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ) ಪಾಕ್ಷಿಕ ಆಚರಣೆ ಹಾಗೂ ಸೇವಾ ಸಪ್ತಾಹವನ್ನು ನವೆಂಬರ್, 21 ರಿಂದ ಡಿಸೆಂಬರ್, 4 ರವರೆಗೆ ನಡೆಯಲಿದೆ.
ಪುರುಷರಿಗೆ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ (ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ) ಸುಲಭ ಹಾಗೂ ಸರಳ ವಿಧಾನ. ಶಸ್ತ್ರ ಚಿಕಿತ್ಸೆಯನ್ನು ಮಕ್ಕಳು ಬೇಡವೆಂದು ನಿರ್ಧರಿಸಿದ ಪುರುಷರಿಗೆ, ಗಂಡಾಂತರ ತೊಂದರೆಗಳು ಇರುವಂತಹ ಗರ್ಭಿಣಿಯರ ಗಂಡಂದಿರಿಗೆ ಹಾಗೂ ಸಂತಾನ ನಿರೋಧಕ್ಕಾಗಿ ಶಾಶ್ವತ ವಿಧಾನ ಬಯಸುವವರಿಗೆ ಮಾಡಲಾಗುವುದು. ಇದು ಯಾವುದೇ ಗಾಯ ಹೊಲಿಗೆ ಇಲ್ಲದೆ 5 ರಿಂದ 10 ನಿಮಿಷಗಳಲ್ಲಿ ನಡೆಸುವ ಸುಲಭ, ಸರಳ ಚಿಕಿತ್ಸೆ. ಎನ್‍ಎಸ್‍ವಿ ಚಿಕಿತ್ಸೆಯಿಂದ ಲೈಂಗಿಕ ಹಾಗೂ ದೈಹಿಕ ಶಕ್ತಿಗೆ ಕುಂದುಂಟಾಗುವುದಿಲ್ಲ ಹಾಗೂ ಚಿಕಿತ್ಸೆ ನಡೆದ ಅರ್ಧ ಗಂಟೆಯಲ್ಲಿ ಮನೆಗೆ ತೆರಳಬಹುದು.
ಎನ್‍ಎಸ್‍ವಿ ಚಿಕಿತ್ಸೆಯಿಂದಾಗಿ ಪುರುಷರಲ್ಲಿ ದೈಹಿಕ ನಿಶ್ಯಕ್ತಿ ಉಂಟಾಗುವುದಿಲ್ಲ, ಚಿಕಿತ್ಸೆಯ ನಂತರವೂ ಮೊದಲಿನಂತೆಯೇ ಎಲ್ಲಾ ಕೆಲಸಗಳನ್ನು ಮಾಡಬಹುದು. ಇದು ಚಿಕಿತ್ಸೆ ಪಡೆದ ವ್ಯಕ್ತಿಯು ಮಾಡುವ ಕೆಲಸವನ್ನು ಅವಲಂಭಿಸಿರುತ್ತದೆ. ಸುಲಭದ ಕೆಲಸವಾಗಿದ್ದರೆ ಚಿಕಿತ್ಸೆಯ 48 ಗಂಟೆಗಳ ನಂತರ ಕೆಲಸ ಆರಂಭಿಸಬಹುದು. ಸೈಕಲ್ ತುಳಿಯುವುದು ಹಾಗೂ ಇಂತಹುದೇ ಕೆಲಸಗಳನ್ನು ಕನಿಷ್ಠ 7 ದಿನಗಳ ನಂತರ ಮಾಡಬಹುದು. ಎನ್‍ಎಸ್‍ವಿ ಚಿಕಿತ್ಸೆಯಿಂದ ಪುರುಷರ ಲೈಂಗಿಕ ಶಕ್ತಿ ಹಾಗೂ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ.
ಎನ್‍ಎಸ್‍ವಿ ಚಿಕಿತ್ಸೆ ಪಡೆದವರು ಚಿಕಿತ್ಸೆಯು ಯಶಸ್ವಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳಲು ಮೂರು ತಿಂಗಳ ನಂತರ ವೀರ್ಯ ವಿಶ್ಲೇಷಣಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಎನ್‍ಎಸ್‍ವಿ ಗರ್ಭಧಾರಣೆ ತಡೆಯುವ ವಿಧಾನ ಮಾತ್ರ. ಇದರಿಂದ ಲೈಂಗಿಕ ರೋಗಗಳನ್ನು ತಡೆಯಲು ಸಾಧ್ಯವಿಲ್ಲ. ಎನ್‍ಎಸ್‍ವಿ ಶಾಶ್ವತ ವಿಧಾನ, ಆದರೂ ಅದನ್ನು ಪುನರ್ ಬದಲಾಯಿಸಲು ಸಾಧ್ಯ. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡವರಿಗೆ ಪ್ರೋತ್ಸಾಹಧನ- ರೂ.1,100, ಪ್ರೇರೇಪಕರಿಗೆ- ರೂ.200 ಎಂಬುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ.ಮೋಹನ್.ಕೆ ಅವರು ನವೆಂಬರ್, 21 ರಿಂದ ಡಿಸೆಂಬರ್, 04 ರವರೆಗೆ ನಡೆಯುವ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ವಿಧಾನದ (ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ) ಪಾಕ್ಷಿಕ ಆಚರಣೆ ಹಾಗೂ ಸೇವಾ ಸಪ್ತಾಹದ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಪುರುಷರ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ವಿಧಾನದಲ್ಲಿ (ನೋ ಸ್ಕಾಲ್ಪೆಲ್ ವ್ಯಾಸೆಕ್ಟಮಿ) 2017-18 ರಲ್ಲಿ 26, 2018-19 ರಲ್ಲಿ 27 ಮತ್ತು 2019-20 ರಲ್ಲಿ 20 ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಆನಂದ್ ಅವರು ಮಾಹಿತಿ ನೀಡಿದ್ದಾರೆ.