ಮಡಿಕೇರಿಯಲ್ಲಿ ಸೀರತ್ ಅಭಿಯಾನ : ಸಮಸ್ಯೆಗಳಿಂದ ಮುಕ್ತರಾಗಲು ದಾರ್ಶನಿಕತೆಯನ್ನು ಅವಲಂಬಿಸಿ : ಎಂ.ಹೆಚ್.ಮುಹಮ್ಮದ್ ಕುಂಞಿ ಕರೆ

19/11/2020

ಮಡಿಕೇರಿ ನ.19 : ಪ್ರಸ್ತುತ ಅನುಭವಿಸುತ್ತಿರುವ ಸಮಸ್ಯೆಗಳಿಂದ ಮಾನವನು ಹೊರಬರಬೇಕಾದಲ್ಲಿ ದಾರ್ಶನಿಕತೆ ಮತ್ತು ಧರ್ಮದೆಡೆಗೆ ಮನಸ್ಸು ಮರಳ ಬೇಕಾಗಿದೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಹಾಗೂ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಎಂ.ಹೆಚ್.ಮುಹಮ್ಮದ್ ಕುಂಞಿ ತಿಳಿಸಿದ್ದಾರೆ.
ಮಡಿಕೇರಿಯ ಕಾರಣ್ಯ ಸದನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಶಾಖೆ “ಪ್ರವಾದಿ ಮುಹಮ್ಮದ್ (ಸ): ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ” ಸೀರತ್ ಅಭಿಯಾನದ ಅಂಗವಾಗಿ ಏರ್ಪಡಿಸಿದ್ದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ವಿಷಯ ಮಂಡನೆ ಮಾಡಿ ಅವರು ಮಾತನಾಡಿದರು.
“ನಾವು ಕೊರೋನಾ ನಂತರದ ದಿನಗಳಲ್ಲಿ ಹಲವು ವಾಸ್ತವಿಕತೆಗಳನ್ನು ಅಂಗೀಕರಿಸಬೇಕಿದೆ. ಧರ್ಮಗಳು ಮನುಷ್ಯನಿಗೆ ಬದುಕಿನ ಚೌಕಟ್ಟನ್ನು ಕಲಿಸಿವೆ ಹಾಗೂ ತಮ್ಮ ಗೌರವದ ಅರಿವನ್ನು ಮೂಡಿಸಿದೆ. ಧಾರ್ಮಿಕ ಚಿಂತನೆಗಳು ಮನುಷ್ಯನ ಬದುಕಿಗೆ ಆದರ್ಶದ ಬೆಂಬಲವನ್ನು ನೀಡಿವೆ. ಆದ್ದರಿಂದ ಜನ ಧರ್ಮ ಮಾರ್ಗದೆಡೆಗೆ ಮರಳಬೇಕಾದ ಅನಿವಾರ್ಯತೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಂಕಣಗಾರ್ತಿ ಉಷಾಪ್ರೀತಮ್ ಅವರು ಮಾತನಾಡಿ “ಧರ್ಮಗಳಲ್ಲಿ ಯಾವುದೇ ದೋಷಗಳು ಕಾಣುವುದಿಲ್ಲ. ಆದರೆ ಧರ್ಮದ ಅನುಯಾಯಿಗಳು ಎಂದೆನಿಸಿಕೊಂಡವರೇ ಧರ್ಮವನ್ನು ತಪ್ಪಾಗಿ ಗ್ರಹಿಸಿಕೊಂಡಿರುವುದರಿಂದ ಸಮಸ್ಯೆಗಳು ಉದ್ಭವಿಸಿವೆ. ಧರ್ಮಗಳ ನೈಜ ಸಾರವನ್ನು ಬಿತ್ತರಿಸುವುದರ ಮೂಲಕ ಆರೋಗ್ಯವಂತ ಸ್ವಸ್ಥ ಸಮಾಜವನ್ನು ನಿರ್ಮಿಸುವ ಗುರಿಯನ್ನು ಪ್ರವಾದಿ ಮುಹಮ್ಮದ್(ಸ)ರವರೂ ಸೇರಿದಂತೆ ಎಲ್ಲಾ ದಾರ್ಶನಿಕರೂ ಜನರಿಗೆ ಸಂದೇಶ ನೀಡಿದ್ದರು” ಎಂದರು.
ಧರ್ಮ ಪ್ರತಿಯೊಬ್ಬ ವ್ಯಕ್ತಿಗೆ ಚಲನಶೀಲತೆ ಮತ್ತು ಶಿಸ್ತಿನ್ನು ಕಲಿಸುತ್ತಿದ್ದು, ಧರ್ಮ ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕಿ ಜನರನ್ನು ದುರ್ಬಲರನ್ನಾಗಿಸುವ ಬದಲು ಧರ್ಮವನ್ನು ವಿಶಾಲವಾದ ಮನೋಸ್ಥಿತಿಯಲ್ಲಿ ಅರಿತುಕೊಂಡು ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟರು.
ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮೆಹಬೂಬ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಜಮಾಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಂ ಸಮಾರೋಪ ಭಾಷಣ ಮಾಡಿದರು.
ಸ್ಥಾನೀಯ ಅಧ್ಯಕ್ಷ ಜಿ.ಹೆಚ್.ಮುಹಮ್ಮದ್ ಹನೀಫ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಮುಖರಾದ ಅಬ್ದುಲ್ಲಾ ವಂದಿಸಿದರು.