ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.82.50 ಲಕ್ಷ ನಿವ್ವಳ ಲಾಭ

19/11/2020

ಮಡಿಕೇರಿ ನ.19 : ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2019-20ನೇ ಸಾಲಿನಲ್ಲಿ ರೂ.82.50 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಟಿ.ಆರ್.ಶರವಣಕುಮಾರ್ ತಿಳಿಸಿದ್ದಾರೆ.
ಅವರು ಸಂಘದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು 2021 ರಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಸಂಘ ಈ ಸಾಲಿನಲ್ಲಿ ಒಟ್ಟು 155.24 ಕೋಟಿ ವಾರ್ಷಿಕ ವ್ಯವಹಾರ ನಡೆಸಿದೆ ಎಂದು ಮಾಹಿತಿ ನೀಡಿದರು. ಸಂಘವು ಪ್ರಸಕ್ತ 3339 ಸದಸ್ಯರನ್ನು ಹೊಂದಿದ್ದು ರೂ 2.81 ಕೋಟಿಗಳನ್ನು ಪಾಲು ಬಂಡವಾಳವಾಗಿ ಸಂಗ್ರಹಿಸಲಾಗಿದೆ. ಈ ಸಾಲಿನ ಮಾರ್ಚ್ ಅಂತ್ಯಕ್ಕೆ 35.04 ಕೋಟಿ ರೂ.ಗಳಷ್ಟು ಠೇವಣಿ ಸ್ವೀಕರಿಸಲಾಗಿದೆ. ನಿರಖು ಠೇವಣಿಗಳಿಗೆ ಶೇ 7.5 ರಷ್ಟು ಬಡ್ಡಿ ನೀಡಲಾಗುತ್ತಿದ್ದು ಹಿರಿಯ ನಾಗರಿಕರಿಗೆ, ನಿವೃತ್ತ ಸೇನಾ ಯೋಧರಿಗೆ ಶೇ .5 ರಷ್ಟು ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಸಂಘದಲ್ಲಿ ಕ್ಷೇಮನಿಧಿ 2.48 ಕೋಟಿ, ಕಟ್ಟಡ ನಿಧಿ ರೂ 1.73 ಕೋಟಿ, ಮರಣ ನಿಧಿ ರೂ 22.23 ಲಕ್ಷ ಸೇರಿದಂತೆ ಒಟ್ಟು ರೂ 4.65 ಕೋಟಿಗಳಷ್ಟು ನಿಧಿಗಳ ಸಂಗ್ರಹವಿದೆ. ಸಂಘದಲ್ಲಿ ಕೃಷಿ ಸಾಲ, ಜಾಮೀನು ಸಾಲ, ಮಧ್ಯಮಾವಧಿ ಸಾಲ, ಪಿಗ್ಮಿ ಸಾಲ, ವ್ಯಾಪಾರ ಮತ್ತು ವ್ಯಾಪಾರಾಭಿವೃದ್ಧಿ, ಹೈನುಗಾರಿಕೆ, ವಾಹನ ಸಾಲ, ಆಭರಣ ಸಾಲಗಳನ್ನು ನೀಡಲಾಗುತ್ತಿದೆ. ಸಂಘದಲ್ಲಿ 62 ಸ್ವಸಹಾಯ ಗುಂಪುಗಳಿದ್ದು ಸಂಘದ ಸ್ವಂತ ಬಂಡವಾಳದಿಂದ ರೂ 78.81 ಲಕ್ಷದಷ್ಟು ಸಾಲ ವಿತರಿಸಲಾಗಿದೆ. ಕೋವಿಡ್ ಸಂಕಷ್ಟದಲ್ಲಿದ್ದ ಸಂದರ್ಭ ತುರ್ತು ಅರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಗರಿಷ್ಠ 50 ಸಾವಿರ ನೀಡುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸಲಾಗಿದೆ. 256 ಸದಸ್ಯರಿಗೆ ರೂ 1.32 ಕೋಟಿಗಳಷ್ಟು ಸಾಲದ ನೆರವು ನೀಡಲಾಗಿದೆ ಎಂದು ಶರವಣಕುಮಾರ್ ತಿಳಿಸಿದರು.
ದುರ್ಬಲ ವರ್ಗದ ಮಹಿಳೆಯರಿಗೆ ಹೆಚ್ಚಿನ ಬಡ್ಡಿ ಸಂಸ್ಥೆಗಳಿಂದ ಶೋಷಣೆಯನ್ನು ತಪ್ಪಿಸಲು ವನಿತಾ ಬಂಧು ಎಂಬ ಜಂಟಿ ಬಾಧ್ಯತಾ ಸಾಲ ಯೋಜನೆ ಪ್ರಾರಂಭಿಸಲಾಗುತ್ತಿದೆ. ಸಂಘವು ಕಳೆದ 25 ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದ್ದು ಸದಸ್ಯರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದೇವೆ. ಕಳೆದ 7 ವರ್ಷಗಳಿಂದ ಶೇ.18 ರಿಂದ ಶೇ.25 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಸುಸಜ್ಜಿತ ಕಟ್ಟಡವೊಂದು ರೂ 3.12 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಹಳೆಯ ಕಟ್ಟಡವನ್ನು ಬಾಡಿಗೆಗೆ ನೀಡಲಾಗಿದೆ. ಎಲ್ಲಾ ಮೂಲಭೂತ ಸೌಲಭ್ಯವುಳ್ಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಕಟ್ಟಡದಲ್ಲಿ ಸದಸ್ಯರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಒಳಗೊಂಡು ಉತ್ತಮ ಸೇವೆ ಕಲ್ಪಿಸುತ್ತಿದೆ. 300 ರಷ್ಟು ಬಡ ವಿದ್ಯಾರ್ಥಿಗಳಿಗೆ ಸಂಘದಿಂದ ಉಚಿತವಾಗಿ ಬಟ್ಟೆ ಸಾಮಗ್ರಿಗಳು, ಶಾಲಾ ಬ್ಯಾಗ್ ಕಿಟ್‍ಗಳನ್ನು 4.51 ಲಕ್ಷ ರೂ ವೆಚ್ಚದಲ್ಲಿ ನೀಡಲಾಗಿದೆ. ಕೋವಿಡ್ 19 ಸಂದರ್ಭ ಕೆಲಸ ನಿರ್ವಹಿಸಿದ ಆಶಾ ಕಾರ್ಯಕರ್ತರನ್ನು ಗೌರವಿಸಿ ಸನ್ಮಾನಿಸುವುದರೊಂದಿಗೆ ಆರೋಗ್ಯ ಕಿಟ್ ವಿತರಿಸಲಾಗಿದೆ. ಕೋವಿಡ್ 19 ಆರ್ಥಿಕ ಸಂಕಷ್ಟ ಹಿನ್ನಲೆಯಲ್ಲಿ ಸಾಲಗಾರ ಸದಸ್ಯರಿಗೆ ಹೆಚ್ಚಿನ ಅನುಕೂಲ ಒದಗಿಸಿಕೊಡಲಾಗಿದೆ. ವಾರ್ಷಿಕ ಮಹಾಸಭೆ ಈ ತಿಂಗಳ 22 ರಂದು ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು 7 ರಿಂದ ಪದವಿ ತರಗತಿ ತನಕ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ವಿವರ ಒದಗಿಸಿದರು.
1921 ರಲ್ಲಿ ಪ್ರಾರಂಭಗೊಂಡ ಸಂಘ 2021 ಕ್ಕೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭ 1 ಎಕರೆಯಷ್ಟು ಪರಿವರ್ತಿತ ಜಾಗ ಖರೀದಿಸಲು ಕಳೆದ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಶತಮಾನೋತ್ಸವ ಸವಿನೆನಪಿಗಾಗಿ ಉನ್ನತ ತಂತ್ರಜ್ಞಾನದೊಂದಿಗೆ ಸದಸ್ಯರ ಅನುಕೂಲಕ್ಕೆ ಸೂಕ್ತ ಸಂಚಾರಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆ ಕೈಗೊಳ್ಳಲಾಗುವುದು. ಎರಡು ದಿನಗಳ ಕಾಲ ಕಾರ್ಯಕ್ರಮ ಹಮ್ಮಿಕೊಂಡು ಶತಮಾನೋತ್ಸವ ಆಚರಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಶರವಣಕುಮಾರ್ ತಿಳಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್, ನಿರ್ದೇಶಕರಾದ ಡಿ.ವಿ.ರಾಜೇಶ್, ಅಬ್ದುಲ್ ಖಾದರ್, ಪಿ.ಎಂ.ಕವಿತಾ, ಕೆ.ವಿ.ನೇತ್ರಾವತಿ, ಜಿ.ಪಿ.ಮಧುಕುಮಾರ್ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಹಾಜರಿದ್ದರು.