ನಾಯಕರನ್ನು ನಿರ್ಲಕ್ಷಿಸಿದರೆ ಕಾಂಗ್ರೆಸ್ ಉದ್ಧಾರವಾಗಲ್ಲ

20/11/2020

ಬೆಂಗಳೂರು ನ.20 : ಸ್ಥಳೀಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕೆ ಹೊರತು ನಾಯಕರನ್ನು ನಿರ್ಲಕ್ಷ್ಯ ಮಾಡಿದರೆ ಪಕ್ಷ ಉದ್ಧಾರವಾಗಲ್ಲ. ಸಿದ್ಧಾಂತ ಹಳಿ ತಪ್ಪಿದರೆ ಪಕ್ಷ ಸರ್ವನಾಶ ಖಂಡಿತ. ನಮ್ಮ ವರಿಷ್ಠರಿಗೆ ನಾವು ಬೆಲೆ ಕೊಡಬೇಕು. ನಮ್ಮ ಕ್ಷೇತ್ರಗಳಲ್ಲಿ ನಾವು ಪಕ್ಷವನ್ನು ಬಲಿಷ್ಠಗೊಳಿಸಬೇಕು. ಬೇರೆಯವರ ಮೇಲೆ ಜವಾಬ್ದಾರಿ ಹಾಕಿ ತಾವು ತಪ್ಪಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜನ್ಮದಿನಾಚರಣೆ ಹಿನ್ನಲೆಯಲ್ಲಿ ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚುನಾವಣಾ ಸೋಲು ಹಾಗೂ ಸಂಘಟನೆಯಲ್ಲಿ ವೈಫಲ್ಯ ಕುರಿತು ಪಕ್ಷದ ನಾಯಕರಿಗೆ ಖಾರವಾಗಿಯೇ ಕ್ಲಾಸ್ ತೆಗೆದುಕೊಂಡರು.
ಸ್ಥಳೀಯ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಓರ್ವ ಕಾಪೆರ್Çೀರೇಟರಗಳನ್ನು ಆರಿಸಿ ಕಳುಹಿಸುವುದಿಲ್ಲ. ತಾವು ಸರಿಯಾಗಿ ಜವಾಬ್ದಾರಿ ನಿಭಾಯಿಸದೆ ಅಭ್ಯರ್ಥಿ ಸೋತರೆ ರಾಹುಲ್ ಗಾಂಧಿ, ಸೋನಿ ಯಾ ಗಾಂಧಿ ಕಾರಣವೆನ್ನುತ್ತಾರೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವವರು ನೀವೇ. ಇಂತಹವರಿಗೆ ಟಿಕೆಟ್ ಬೇಕು ಎಂದು ಸ್ಥಳೀಯ ನಾಯಕರು ಟಿಕೆಟ್ ಕೊಡಿಸುತ್ತಾರೆ. ಸೋತಾಗ ಪಕ್ಷದ ಹಿರಿಯ ನಾಯಕರ ಮೇಲೆ ತಪ್ಪು ಹೊರಿಸುತ್ತಾರೆ. ರಾಜ್ಯದಲ್ಲಿ ರಾಹುಲ್ ಗಾಂಧಿ ನಾಯಕರಾಗಿದ್ದಾರೆಯೇ ಎಂದು ಖಾರವಾಗಿಯೇ ಸ್ಥಳೀಯ ನಾಯಕರನ್ನು ಮಲ್ಲಿಕಾರ್ಜುನ್ ಖರ್ಗೆ ತರಾಟೆ ತೆಗೆದುಕೊಂಡರು.