ಪೆರಾಜೆಯಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ

20/11/2020

ಮಡಿಕೇರಿ ನ. 20 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು,ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ. ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,ಪೆರಾಜೆಯ ಸಂಯುಕ್ತ ಆಶ್ರಯದಲ್ಲಿ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ “ವ್ಯವಹಾರ, ಉದ್ಯೋಗ ಕಳೆದುಕೊಂಡವರು, ಬಾಧಿತರು ಪುನರುದ್ಯೋಗಸ್ಥರಾಗಲು ಕೌಶಲ್ಯಾಭಿವೃದ್ಧಿ” ದಿನಾಚರಣೆಯನ್ನು ಆಚರಿಸಲಾಯಿತು.

ಪೆರಾಜೆ ಪ್ರಾ.ಕೃ.ಪ.ಸ.ಸಂಘದಲ್ಲಿ ನಡೆದ ಸಪ್ತಾಹ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ದೀಪಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, “ಸಹಕಾರ ಕ್ಷೇತ್ರದ ಬೆಳವಣಿಗೆಯು ಹಿರಿಯರ ದೂರದೃಷ್ಟಿಯಿಂದ ನಮಗೆ ಹಾಕಿಕೊಟ್ಟ ಅಡಿಗಲ್ಲು ಆಗಿದ್ದು, ಪ್ರಸ್ತುತ ರೈತರ ಉತ್ಪನ್ನಗಳನ್ನು ಶೇಖರಿಸುವುದು, ಮಾರುಕಟ್ಟೆ ಒದಗಿಸುವದು, ರಸಗೊಬ್ಬರ ಮತ್ತು ಪರಿಕರ ಒದಗಿಸುವುದರಲ್ಲಿ ಮಹತ್ತರ ಸಾಧನೆಯನ್ನು ಮಾಡಿದೆ. ಸಹಕಾರ ಕ್ಷೇತ್ರವು ಪ್ರತಿಯೊಂದು ರಂಗದಲ್ಲಿ ವ್ಯಾಪಿಸಿದೆ ಇದನ್ನು ಇನ್ನಷ್ಟು ಸದೃಢಗೊಳಿಸೋಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಕಾರ ಸಂಘಗಳ ಉಪನಿಬಂಧಕ ಮಾತನಾಡಿ “ಸಹಕಾರ ಚಳುವಳಿ ಎಂದರೆ ಒಂದು ಸಹಕಾರ ಸಂಘವು ಕೇವಲ ಸಾಲ ನೀಡುವುದು, ಲಾಭ ಗಳಿಸುವುದು ಮಾತ್ರವಲ್ಲ ರೈತರ ನೈಜ್ಯ ಸಮಸ್ಯೆಗಳನ್ನು ಅರಿತು ಅದಕ್ಕೆ ಪರಿಹಾರ ಕಂಡುಕೊಳ್ಳುವುದೇ ಸಹಕಾರ ಚಳುವಳಿಯ ಮೂಲವಾಗಿದೆ” ಎಂದು ಅಭಿಪ್ರಾಯಪಟ್ಟರು.
ವಿಷಯತಜ್ಞ ವೀರಪ್ಪಗೌಡ, ನಿವೃತ್ತ ಕೈಗಾರಿಕಾ ವಿಸ್ತರಣಾಧಿಕಾರಿ ಸಪ್ತಾಹದ ಮಹತ್ವದ ಬಗ್ಗೆ ಮಾತನಾಡಿ “ನಮ್ಮ ಬದುಕು ಕೇವಲ ಪೇಟೆ ಪಟ್ಟಣಗಳಲ್ಲಿ ಇರುವುದಲ್ಲ ಬದುಕಿನ ಮೂಲ ಇರುವುದು ಹಳ್ಳಿಯಲ್ಲಿ. ರೈತ ಬೆಳೆದ ಕಚ್ಚಾವಸ್ತುವು ಹತ್ತಿರದಲ್ಲೇ ಹೆಚ್ಚಿನ ಬೆಲೆ ಇರುವ ಉತ್ಪನ್ನವಾಗಿ ಪರಿವರ್ತನೆಯಾಗುವ ವ್ಯವಸ್ಥೆ ಅಂದರೆ ಕೈಗಾರಿಕೆಗಳು ಹುಟ್ಟಿಕೊಂಡಲ್ಲಿ ಪ್ರತಿಯೊಬ್ಬರೂ ಉದ್ಯೋಗಸ್ಥರಾಗುತ್ತಾರೆ ಮತ್ತು ರೈತರೂ ಆರ್ಥಿಕವಾಗಿ ಸದೃಢರಾಗುತ್ತಾರೆ” ಎಂದು ಸವಿವರವಾಗಿ ಮಾತನಾಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ಅಧ್ಯಕ್ಷರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕರು ಮತ್ತು ಪಿ.ಎಲ್.ಡಿ ಬ್ಯಾಂಕಿನ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ “ಸದಸ್ಯರು ಸಹಕಾರ ಸಂಘಗಳ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು, ಸದಸ್ಯರ ಕ್ರಿಯಾಶೀಲತೆಯೇ ಸಂಘಗಳ ಪ್ರಗತಿಯ ಬುನಾದಿ. ಸಹಕಾರ ಸಂಘಗಳ ಕಾಯಿದೆಯಲ್ಲಿ ಇದಕ್ಕೆ ಅಗತ್ಯ ತಿದ್ದುಪಡಿ ತರಲಾಗಿದೆ. ಇದನ್ನು ಎಲ್ಲರೂ ಗೌರವಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ಧೇಶಕ ಕಿಮ್ಮುಡಿರ ಜಗದೀಶ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನ ನಿರ್ದೇಶಕರುಗಳಾದ, ಬಿದ್ದಾಟಂಡ ರಮೇಶ್ ಚಂಗಪ್ಪ, ಕೊಡಪಾಲು ಎಸ್. ಗಣಪತಿ, ಕೋಡಿರ ಎಂ. ತಮ್ಮಯ್ಯ, ವಾಂಚಿರ ಅಜಯ್ ಕುಮಾರ್, ಪಯಸ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ಸಿ ಅನಂತ ಹಾಗೂ ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಬಿ ಮೋಣಪ್ಪ ಉಪಸ್ಥಿತರಿದ್ದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮದಲ್ಲಿ ಪ್ರಾರ್ಥನೆಮಾಡಿ ನಿರೂಪಿಸಿದರು. ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರ್ವರನ್ನು ವಂದಿಸಿದರು.