ಡಾ.ಕಸ್ತೂರಿರಂಗನ್ ವರದಿ ಜಾರಿಗೆ ವಿರೋಧ : ಮಡಿಕೇರಿಯಲ್ಲಿ ರೈತ ಸಂಘ ಪ್ರತಿಭಟನೆ

November 20, 2020

ಮಡಿಕೇರಿ ನ.20 : ಡಾ.ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಮತ್ತು ಭತ್ತಕ್ಕೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕೊಡಗು ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಸಂಚಾಲಕ ಡಾ.ಈ.ರಾ.ದುರ್ಗಾಪ್ರಸಾದ್, ಕೇಂದ್ರ ಸರ್ಕಾರ ಡಾ.ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ತರುವುದಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡಾವಿಟ್ ಮಂಡಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
2014ರ ಲೋಕಸಭಾ ಚುನಾವಣೆಗೂ ಮೊದಲು ಬಿಜೆಪಿ ನೇತೃತ್ವದ ಸರ್ಕಾರ ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿದ್ದು, ಚುನಾವಣೆ ಸಂದರ್ಭದ ಪ್ರಣಾಳಿಕೆಯಲ್ಲೂ ವರದಿ ಅನುಷ್ಠಾನಗೊಳಿಸುವುದಿಲ್ಲ ಎಂದು ಭರವಸೆ ನೀಡಿದ್ದರು.
ಅಲ್ಲದೇ ಕೊಡಗು ಜಿಲ್ಲೆಯಲ್ಲಿ ವರದಿಯನ್ನು ವಿರೋಧಿಸಿ ಬಿಜೆಪಿ ನಾಯಕರೇ ಹಲವು ಹೋರಾಟಗಳನ್ನು ರೂಪಿಸಿದ್ದು, ಯಾರೇ ಹೋರಾಟ ಮಾಡಲಿ, ಬಿಡಲಿ ನಮ್ಮ ಪಕ್ಷವಂತೂ ಹೋರಾಟ ನಡೆಸಿಯೇ ನಡೆಸಲಿದೆ. ಇದಕ್ಕಾಗಿ ಯಾವ ತ್ಯಾಗಕ್ಕೂ ನಾವು ಸಿದ್ಧ ಎಂದು ಹೇಳಿದ್ದರು, ಆದರೆ ಇದೀಗ ಆ ಭರವಸೆಗಳೆಲ್ಲ ಹುಸಿಯಾಗಿದೆ. ಈ ಭರವಸೆಯ ಆಧಾರದಲ್ಲೇ ಸಂಸದ ಪ್ರತಾಪ್ ಸಿಂಹ ಅವರು ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲದೇ ಬಿಜೆಪಿ ಪಕ್ಷ ನುಡಿದಂತೆ ನಡೆಯುವ ಪಕ್ಷ ಎಂದು ಜನರು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ಪ್ರಧಾನಿಯಾಗಿ ನರೇಂದ್ರಮೋದಿ ಅವರು ಅಧಿಕಾರ ಸ್ವೀಕರಿಸಿದ ಮೂರು ತಿಂಗಳಲ್ಲೇ ಸರ್ವೋಚ್ಛ ನ್ಯಾಯಾಲಯದಲ್ಲಿ ಅಫಿಡಾವಿಟ್ ಮಂಡಿಸಿ ಕಸ್ತೂರಿರಂಗನ್ ವರದಿ ಜಾರಿ ಮಾಡುವುದಾಗಿ ಹೇಳುವ ಮೂಲಕ ಜನರಿಗೆ ಕೊಟ್ಟ ಭರವಸೆಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ತಕ್ಷಣ ಮತ್ತೊಂದು ಅಫಿಡಾವಿಟ್‍ನ್ನು ಸಲ್ಲಿಸಿ ಕ್ಷಮೆ ಕೋರುವುದರೊಂದಿಗೆ ವರದಿ ಜಾರಿ ಮಾಡುವುದಿಲ್ಲವೆಂದು ಜನಪರ ನಿಲುವನ್ನು ಪ್ರಕಟಿಸಬೇಕೆಂದು ದುರ್ಗಾಪ್ರಸಾದ್ ಒತ್ತಾಯಿಸಿದರು.
ಭತ್ತಕ್ಕೆ ಅತ್ಯಲ್ಪ ಬೆಂಬಲ ಬೆಲೆ ಘೋಷಿಸಲಾಗಿದ್ದು, ಇಂದಿನ ಕೃಷಿ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ಕ್ವಿಂಟಾಲ್‍ಗೆ 2,500 ರೂ.ಗಳನ್ನಾದರೂ ಘೋಷಿಸಬೇಕು. ಸರಕಾರವೇ ರೈತರಿಂದ ಭತ್ತ ಖರೀದಿಸುವಂತ್ತಾಗಬೇಕು, ಭತ್ತ ಸಂಗ್ರಹಣಾ ಕೇಂದ್ರಗಳನ್ನು ಹೋಬಳಿಗೊಂದರಂತೆ ಆರಂಭಿಸಬೇಕು, ಭತ್ತವನ್ನು ನಿರಾಕರಿಸುವ ಸಂದರ್ಭ ಸಾಗಾಟದ ವೆಚ್ಚವನ್ನು ಸರ್ಕಾರವೇ ರೈತನಿಗೆ ಒದಗಿಸಬೇಕು, ಪ್ರಾಕೃತಿಕ ವಿಕೋಪದಿಂದ ಮತ್ತು ಬೆಲೆ ಕುಸಿತದಿಂದ ಬೆಳೆಗಾರರು ಸಂಕಷ್ಟಕ್ಕೊಳಗಾಗಿರುವುದರಿಂದ ಸಣ್ಣ ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕು, ಶೂನ್ಯ ದರದಲ್ಲಿ ರೈತರಿಗೆ ಸಾಲ ಲಭ್ಯವಾಗುವಂತೆ ಸಂವಿಧಾನ ರೂಪಿಸಬೇಕು ಎಂದು ಒತ್ತಾಯಿಸಿರುವ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು. ಸಂಘದ ಪ್ರಮುಖರಾದ ಹಮೀದ್, ಬಾಬುಟ್ಟಿ, ಕುಶಾಲಪ್ಪ, ಅರುಣ್, ರಶೀದ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!