ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣಕ್ಕೆ ಗುಣನಿಯಂತ್ರಣ ಅಧಿಕಾರಿಗಳ ತಂಡ ಭೇಟಿ : ಪರಿಶೀಲನೆ

20/11/2020

ಮಡಿಕೇರಿ ನ. 20 : ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಟರ್ಫ್ ಹಾಕಿ ಕ್ರೀಡಾಂಗಣದ ಕಾಮಗಾರಿ ಕಳಪೆ ಆರೋಪದಲ್ಲಿ ಗುಣನಿಯಂತ್ರಣ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
4.15ಕೋಟಿ ರೂ.ವೆಚ್ಚದ ಕಾಮಗಾರಿಯನ್ನು ಹೈದರಾಬಾದ್ ಮೂಲದ ಗ್ರೇಟ್ ಸ್ಫೋಟ್ರ್ಸ್ ಇನ್‍ಫ್ರಾ ಪ್ರೈ.ಲಿ. ಸಂಸ್ಥೆ ನಿರ್ವಹಿಸುತ್ತಿದ್ದು, ಕಾಮಗಾರಿ ವಿಳಂಬ ಹಾಗೂ ರಾತ್ರಿ ಸಮಯದಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಹಿನ್ನೆಲೆಯಲ್ಲಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಕಾಮಗಾರಿ ಪರಿಶೀಲನಾ ಉಸ್ತುವಾರಿ ಸಮಿತಿಯವರು ಸ್ಥಳ ಪರೀಶೀಲನೆ ನಡೆಸಿ, ಕಳಪೆ ಕಾಮಗಾರಿಯ ಸಂಶಯ ವ್ಯಕ್ತಪಡಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಂದಾಜು ಪಟ್ಟಿಯಂತೆ ವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಲು ಸೂಚಿಸಿದ್ದಾರೆ.
ಕಾಮಗಾರಿಯ ಗುಣಮಟ್ಟ ಸಮರ್ಪಕವಾಗಿಲ್ಲ. ಅಂದಾಜುಪಟ್ಟಿಯಂತೆ ಕಾಮಗಾರಿ ನಿರ್ವಹಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾಮಗಾರಿಯ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಇಲಾಖೆಯ ಸಹಾಯಕ ನಿರ್ದೇಶಕರಿಗೆ ದೂರು ನೀಡಲಾಗುವುದು ಎಂದು ಕಾಮಗಾರಿ ಪರಿಶೀಲನಾ ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಎಂ.ಬಿ.ಅಭಿಮನ್ಯುಕುಮಾರ್ ಹೇಳಿದರು.