67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ : ಸೀನಿಯರ್ ಕಾಲೇಜು ವೃತ್ತದಲ್ಲಿ ಪಂದ್ಯಂಡ ಬೆಳ್ಯಪ್ಪ ಅವರ ಪ್ರತಿಮೆ ನಿರ್ಮಿಸಲು ಮನವಿ

20/11/2020


ಮಡಿಕೇರಿ ನ.20 : ಕೊಡಗಿನ ಗಾಂಧಿ ಎಂದೇ ಪ್ರಸಿದ್ಧರಾದ, ಜಿಲ್ಲೆಯಲ್ಲಿ ಸಹಕಾರ ಹಾಗೂ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿರುವ ಪಂದ್ಯಂಡ ಬೆಳ್ಯಪ್ಪ ಅವರ ಪ್ರತಿಮೆಯನ್ನು ನಗರದ ಸೀನಿಯರ್ ಕಾಲೇಜು ವೃತ್ತದಲ್ಲಿ ಸ್ಥಾಪಿಸುವಂತಾಗಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಎ.ಕೆ.ಮನುಮುತ್ತಪ್ಪ ಅವರು ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿದೋದ್ಧೇಶ ಸಹಕಾರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ 67 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದ ಪ್ರಯುಕ್ತ ಸಹಕಾರ ಸಂಸ್ಥೆಗಳ ಮೂಲಕ ‘ಆರ್ಥಿಕ ಸೇರ್ಪಡೆ, ಡಿಜಿಟಲೀಕರಣ ಮತ್ತು ಸಾಮಾಜಿಕ ಜಾಲತಾಣ’ ದಿನಾಚರಣೆ ಹಾಗೂ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ 1950ರಲ್ಲಿ ಸೀನಿಯರ್ ಕಾಲೇಜು ಆರಂಭವಾಗಲು ಪಂದ್ಯಂಡ ಬೆಳ್ಯಪ್ಪ ಅವರ ಕೊಡುಗೆ ಅಪಾರವಾಗಿದೆ. ಅಂದಿನ ಸಂದರ್ಭದಲ್ಲಿ ಪ್ರಧಾನಮಂತ್ರಿ ಜವಹಾರ್‍ಲಾಲ್ ನೆಹರು ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಸೀನಿಯರ್ ಕಾಲೇಜು ಆರಂಭವಾಗಲು ಕಾರಣಕರ್ತರಾಗಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂಬ ಉದ್ದೇಶದಿಂದ ಅಂದು ಸೀನಿಯರ್ ಕಾಲೇಜು ಆರಂಭವಾಗಲು ಪಂದ್ಯಂಡ ಬೆಳ್ಯಪ್ಪ ಅವರು ಶ್ರಮಿಸಿದ್ದಾರೆ ಎಂದು ಮನು ಮುತಪ್ಪ ಅವರು ಸ್ಮರಿಸಿದರು.
ಹಾಗೆಯೇ ಕೊಡಗಿನ ಸಹಕಾರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಪಂದಿಕುತ್ತೀರ ಚಂಗಪ್ಪ ಮತ್ತು ರಾಷ್ಟ್ರ ಮಟ್ಟದಲ್ಲಿಯೇ ದೊಡ್ಡ ಹೆಸರು ಮಾಡಿದವರು ಎಂ.ಸಿ.ನಾಣಯ್ಯ ಅವರು ಎಂದು ಮನುಮುತ್ತಪ್ಪ ಕೊಂಡಾಡಿದರು.
ಕೊಡಗಿನಲ್ಲಿ ಸಹಕಾರ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಹಲವು ಕೃಷಿಕರು ಶ್ರಮಿಸಿದ್ದಾರೆ. ಶಿಕ್ಷಣ, ಸಹಕಾರ ಕ್ಷೇತ್ರಕ್ಕೆ ಭೂಮಿ ದಾನ ಮಾಡಿ, ಈ ಕ್ಷೇತ್ರ ಬಲಪಡಿಸಿದ್ದಾರೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷರು ನುಡಿದರು.
ಕೊಡಗು ಜಿಲ್ಲೆಯ ಸಹಕಾರ ಯೂನಿಯನ್ ಮೂಲಕ ತ್ರೈಮಾಸಿಕ ಪತ್ರಿಕೆಯನ್ನು ತರಲಾಗುತ್ತಿದ್ದು, ಸಹಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಡಿಸಿಸಿ ಬ್ಯಾಂಕ್ ಸಹಕಾರದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಹಕಾರ ಯೂನಿಯನ್ ಮತ್ತಷ್ಟು ಬಲಪಡಿಸುವಂತಾಗಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಹಿರಿಯ ಸಹಕಾರಿ ಹಾಗೂ ಕೊಡಗು ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರಾದ ಎಂ.ಪಿ.ಮುತಪ್ಪ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಹಕಾರ ಕ್ಷೇತ್ರವನ್ನು ಪ್ರತಿಯೊಬ್ಬರೂ ಪ್ರೀತಿಸಬೇಕು. ಜನರಿಂದ ಜನರಿಗಾಗಿ ಜನರಿಗೋಸ್ಕರ ಸಹಕಾರ ಕ್ಷೇತ್ರ ಇದೆ ಎಂಬುದನ್ನು ಅರ್ಥಮಾಡಿಕೊಂಡು ಸಹಕಾರ ಕ್ಷೇತ್ರವನ್ನು ಬೆಳೆಸಬೇಕಿದೆ ಎಂದು ಕರೆ ನೀಡಿದರು.
ಸಹಕಾರ ಸಂಸ್ಥೆಗಳ ಬೈಲಾವನ್ನು ಅಧ್ಯಯನ ಮಾಡಿಕೊಂಡು ಶ್ರದ್ಧೆಯಿಂದ ತೊಡಗಿಸಿಕೊಂಡಲ್ಲಿ ಸಹಕಾರ ಕ್ಷೇತ್ರದ ಮತ್ತಷ್ಟು ಬೆಳವಣಿಗೆಗೆ ಕಾರಣವಾಗಬಹುದು ಎಂದರು.
ಕೊಡಗು ಜಿಲ್ಲೆ ಸೇನೆ, ಸಹಕಾರ, ಸಿನಿಮಾ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಹ ಮುಂದೆ ಇದ್ದು, ಅದನ್ನು ಉಳಿಸಬೇಕಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ಸಹಕಾರ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಜೊತೆಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ಮಾತನಾಡಿ ರಾಷ್ಟ್ರದಲ್ಲಿ 32 ರಾಜ್ಯ ಸಹಕಾರಿ ಬ್ಯಾಂಕ್‍ಗಳು, 363 ಡಿಸಿಸಿ ಬ್ಯಾಂಕ್‍ಗಳು, 95,995 ಪ್ಯಾಕ್ಸ್‍ಗಳು, 7,57,965 ಇತರೆ ಸಹಕಾರ ಬ್ಯಾಂಕ್‍ಗಳು ಒಟ್ಟು 8,54,355 ಸಹಕಾರ ಸಂಘಗಳಿವೆ ಎಂದು ತಿಳಿಸಿದರು.
ಅದೇ ರೀತಿ ರಾಜ್ಯದಲ್ಲಿ ಒಂದು ಸಹಕಾರಿ ಬ್ಯಾಂಕ್, 21 ಡಿಸಿಸಿ ಬ್ಯಾಂಕ್‍ಗಳು, 5,679 ಪ್ಯಾಕ್ಸ್‍ಗಳು, 22,299 ಇತರ ಸಹಕಾರ ಬ್ಯಾಂಕ್‍ಗಳು ಒಟ್ಟು 28 ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತವೆ. ಹಾಗೆಯೇ ಜಿಲ್ಲೆಯಲ್ಲಿ 331 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತವೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರದಲ್ಲಿ ಸುಮಾರು 29 ಕೋಟಿ ಸದಸ್ಯರನ್ನು ಸಹಕಾರ ಸಂಘಗಳು ಹೊಂದಿದ್ದು, 35,327 ಷೇರು ಬಂಡವಾಳ ಹೊಂದಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 2011 ರ ಜನಗಣತಿಯಂತೆ 68,881 ರೈತ ಕುಟುಂಬಗಳಿದ್ದು, 1,36,932 ಮಂದಿ ಕೃಷಿಕರು ಸಹಕಾರ ಸಂಘಗಳಲ್ಲಿ ಸದಸ್ಯತ್ವವನ್ನು ಪಡೆದಿದ್ದಾರೆ. 35,155 ರೈತರಿಗೆ 542.91 ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದೆ ಎಂದು ಬಾಂಡ್ ಗಣಪತಿ ಅವರು ವಿವರಿಸಿದರು.
ಅದರಂತೆ, ಜಿಲ್ಲೆಯ ಸಹಕಾರ ಸಂಘಗಳಲ್ಲಿ 1,36,932 ರೈತರು ಸದಸ್ಯತ್ವವನ್ನು ಪಡೆದಿದ್ದು, ಭೂದಾಖಲೆ ಹೊಂದಿರುವ 38,339 ರೈತರಿಗೆ ಮಾತ್ರ ಬೆಳೆ ಸಾಲದ ಮಿತಿ ಮಂಜೂರಾತಿ ಮಾಡಲು ಸಾಧ್ಯವಾಗಿದ್ದು, ಉಳಿದ 98,593 ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಸಹ ಪ್ರತ್ಯೇಕ ಭೂ ದಾಖಲೆಗಳನ್ನು ಹೊಂದಿಲ್ಲದೇ ಇರುವುದರಿಂದ ಬೆಳೆ ಸಾಲ ಪಡೆಯಲು ಸಾಧ್ಯವಾಗಿಲ್ಲ ಎಂದರು.
ಜಿಲ್ಲೆಯ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವಲ್ಲಿ ಸಹಕಾರ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ. ಆ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್‍ನ ಆಡಳಿತ ಮಂಡಳಿ ರೈತರಿಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಅವರು ತಿಳಿಸಿದರು.
ಕೊಡಗು ಸಹಕಾರ ರತ್ನ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಸಹಕಾರಿಗಳಾದ ಮಾತಂಡ ಎ.ರಮೇಶ್ ಅವರು ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಸಹಕಾರ ಸಂಘಗಳನ್ನು ಬಲಪಡಿಸಲು ಶ್ರಮಿಸಬೇಕಿದೆ ಎಂದರು.
ಸರ್ಕಾರ ಪೌತಿ ಖಾತೆ ಆಂದೋಲನ ಆರಂಭಿಸಿದ್ದು, ಈ ಅವಕಾಶವನ್ನು ಅರ್ಹರು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಶ್ರೇಷ್ಠ ಸಹಕಾರ ಸನ್ಮಾನ ಸ್ವೀಕರಿಸಿದ ಕುಂಬುಗೌಡನ ಉತ್ತಪ್ಪ ಅವರು ಮಾತನಾಡಿ ಧವಸ ಭಂಡಾರ ಸಹಕಾರ ಸಂಘಗಳನ್ನು ಉಳಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಸನ್ಮಾನಿತರಾದ ಮಚ್ಚಮಾಡ ಕಂದಾ ಭೀಮಯ್ಯ, ಚೊಟ್ಟೆಯಂಡಮಾಡ ಬೇಬಿ ಪೂವಯ್ಯ, ಕೆ.ಐ.ಸಿ.ಎಂ. ಪ್ರಾಂಶುಪಾಲಾರದ ಡಾ.ಆರ್.ಎಸ್.ರೇಣುಕಾ ಅವರು ಮಾತನಾಡಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷರಾದ ಪಟ್ಟಡ ಮನು ರಾಮಚಂದ್ರ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಬಿ.ಡಿ.ಮಂಜುನಾಥ್, ಎಚ್.ಎಂ.ರಮೇಶ್, ಪಿ.ಬಿ.ರಘು ನಾಣಯ್ಯ, ಕನ್ನಂಡ ಸಂಪತ್, ಕೆ.ಎ.ಜಗದೀಶ್, ಉಷಾ ತೇಜಸ್ವಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಬಿ.ಎ.ರಮೇಶ್ ಚಂಗಪ್ಪ, ಎನ್.ಎ.ರವಿಬಸಪ್ಪ, ಎಂ.ಪ್ರೇಮ ಸೋಮಯ್ಯ, ಎಚ್.ಎನ್.ರಾಮಚಂದ್ರ, ಪಿ.ಸಿ.ಅಚ್ಚಯ್ಯ, ಕೊಡಪಾಲು ಗಣಪತಿ, ಕೆ.ಎಂ.ತಮ್ಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಪಿ.ಬಿ.ಭರತ್, ಕೆ.ಪಿ.ಮುದ್ದಯ್ಯ, ವಿ.ಕೆ.ಅಜಯ್ ಕುಮಾರ್, ಎನ್.ಎಂ.ಉಮೇಶ್ ಉತ್ತಪ್ಪ, ಪಿ.ಬಿ.ಯತೀಶ್, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಕೆ.ಸಲೀಂ ಇತರರು ಇದ್ದರು.
ಕೊಡಪಾಲು ಗಣಪತಿ ಸ್ವಾಗತಿಸಿದರು. ಆರ್.ಮಂಜುಳ ಪ್ರಾರ್ಥಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಿಇಒ ಯೋಗೇಂದ್ರ ನಾಯಕ ನಿರೂಪಿಸಿದರು. ರವಿ ಬಸಪ್ಪ ವಂದಿಸಿದರು.