ಗಾಂಜಾ ಸಾಗಾಟ : ಸುಂಟಿಕೊಪ್ಪದಲ್ಲಿ ಇಬ್ಬರ ಬಂಧನ

ಮಡಿಕೇರಿ ನ.20 : ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ಗಾಂಜಾ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಸುಂಟಿಕೊಪ್ಪ ಪೊಲೀಸರು 20 ಪ್ಯಾಕೇಟ್ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಕುಶಾಲನಗರದ ಇಬ್ಬರು ಯುವಕರು ಕುಶಾಲನಗರದಿಂದ ಸುಂಟಿಕೊಪ್ಪದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ಸಲುವಾಗಿ ಬೈಕ್ನಲ್ಲಿ(ಕೆ.ಎ.12, ಆರ್.6705) 20 ಪ್ಯಾಕೇಟ್ ಗಾಂಜಾ ಸಾಗಿಸುತ್ತಿದ್ದರು.
ಈ ಮಾಹಿತಿ ಪಡೆದ ಸುಂಟಿಕೊಪ್ಪ ಪೊಲೀಸರು 7ನೇ ಹೊಸಕೋಟೆಯ ಮೆಟ್ನಳ್ಳಿ ಜಂಕ್ಷನ್ನಲ್ಲಿ ಬೈಕ್ ಅನ್ನು ತಡೆ ಹಿಡಿದು ಪರಿಶೀಲನೆ ನಡೆಸಿದ ಸಂದರ್ಭ ಆರೋಪಿಗಳ ಬಳಿ 20 ಪ್ಯಾಕೇಟ್ ಗಾಂಜಾ ಇರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರದ ಮಾದಾಪಟ್ಟಣ ನಿವಾಸಿಗಳಾದ ವಿಜಯ್ ಕಮಾರ್ ಮತ್ತು ಕಿರಣ್ ಅವರನ್ನು ಸ್ಥಳದಲ್ಲೇ ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪುನೀತ್, ಸಿಬ್ಬಂದಿಗಳಾದ ಶ್ರೀನಿವಾಸ್, ಸತೀಶ್, ಗಣೇಶ್, ಪುನೀತ್, ಉದಯ್ ಕುಮಾರ್ ಅವರು ಭಾಗವಹಿಸಿದ್ದರು.